

ಚಡಚಣ: ಹಲವು ಕಾರಣಗಳಿಂದಾಗಿ ಪೋಷಕರಿಂದ ದೂರವಾದ ಅಥವಾ ಪೋಷಕರೇ ಇಲ್ಲದ ಸಾಕಷ್ಟು ಮಕ್ಕಳು ಹಾಗೂ ಮಕ್ಕಳಿಂದ ದೂರವಾದ ವೃದ್ಧರ ಬಾಳಿಗೆ ನೆರಳಾಗಿ ಅನೇಕ ಸರ್ಕಾರೇತರ ಸಂಘ-ಸಂಸ್ಥೆಗಳು ಶ್ರಮಿಸುತ್ತಿರುವುದು ಸ್ಮರಣೀಯ ಎಂದು ಚಡಚಣ ಪಿಎಸ್‌ಐ ಮಹಾದೇವ ಯಲಿಗಾರ ಹೇಳಿದರು.
ಚಡಚಣ ತಾಲೂಕಿನ ಲೋಣಿ ಬಿ.ಕೆ.ಗ್ರಾಮದಲ್ಲಿ ಮೆಹರ ಸಂಸ್ಥೆಯಿಂದ ನಡೆಸಲಾಗುತ್ತಿರುವ ವೃದ್ಧಾಶ್ರಮ ಹಾಗೂ ಅನಾಥಾಶ್ರಮಕ್ಕೆ ಕುಟುಂಬ ಸಮೇತ ಭಾನುವಾರ ಭೇಟಿ ನೀಡಿದಾಗ ಅವರು ಮಾತನಾಡಿದರು.
ಅನಾಥ ಮಕ್ಕಳಿಗೆ ಶಿಕ್ಷಣದ ಜತೆಗೆ ಜೀವನ ನಡೆಸಲು ಬೇಕಾದ ಸಂಸ್ಕಾರ ಹಾಗೂ ಹೊಲಿಗೆ, ಕಂಪ್ಯೂಟರ್ ಸೇರಿದಂತೆ ಮತ್ತಿತರ ವೃತ್ತಿಪರ ಕೋರ್ಸ್‌ಗಳ ತರಬೇತಿ ನೀಡುವುದರ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವ ಪ್ರಯತ್ನ ಆಗಬೇಕು. ವೃದ್ಧರಿಗೆ ಯೋಗಾಸನ, ಸಂಗೀತ, ನೃತ್ಯ, ಭಜನೆ ಸೇರಿದಂತೆ ಮತ್ತಿತರ ಚಟುವಟಿಕೆಗಳಲ್ಲಿ ಅವರು ತೊಡಗಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.
ಪಿಎಸ್‌ಐ ಮಹಾದೇವ ಯಲಿಗಾರ ಅವರು ಅಲ್ಲಿರುವ ಅನಾಥರಿಗೆ ಸಿಹಿಯೂಟದ ವ್ಯವಸ್ಥೆ ಮಾಡಿದ್ದರು. ಚಡಚಣ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಾನ್ ಕಟವಟೆ, ಪಟ್ಟಣದ ವ್ಯಾಪಾರಸ್ಥರಾದ ಬಸವರಾಜ ಭಂಡರಕವಟೆ, ದಯಾನಂದ ಕಟಗೇರಿ, ಶ್ರೀಧರ ಭಂಡರಕವಟೆ ಹಾಗೂ ಪೊಲೀಸ್ ಮತ್ತು ಮೆಹರ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.