

ಹಾವೇರಿ: ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೌಕರಿ ಕೊಡಿಸುವುದಾಗಿ ಆಮಿಷಮೊಡ್ಡಿ 25 ಲಕ್ಷ ರೂ. ಪಡೆದು ವಂಚಿಸಲಾಗಿದ್ದು, ಈ ಕುರಿತು ಡಿಜಿ, ಐಜಿಪಿ ಕಚೇರಿ ಸಿಬ್ಬಂದಿ ವಿರುದ್ಧ ನಗರದ ಸೈಬರ್ ಕೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ವೆಂಕಟಾಪುರದ ನಿವಾಸಿಯಾಗಿರುವ 43 ವರ್ಷ ವಯಸ್ಸಿನ ಶಿಕ್ಷಕರೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿ-, ಐಜಿಪಿ) ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಸುಧೀರ ಟಿ.ಸಿ. ಹಾಗೂ ಬಾದಾಮಿಯ ಸುನೀಲಕುಮಾರ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರುದಾರರ ಸಹೋದರ ಪಿಎಸ್ಐ ಆಗಲು ಪ್ರಯತ್ನಿಸುತ್ತಿದ್ದರು. ಈ ಸಮಯದಲ್ಲಿ ದೂರುದಾರರಿಗೆ, ಆರೋಪಿಗಳ ಪರಿಚಯವಾಗಿತ್ತು. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಪರಿಚಯವೆಂದು ಹೇಳಿದ್ದ ಆರೋಪಿಗಳು, 2020ರಿಂದ 2025ರವರೆಗೆ ಹಂತ ಹಂತವಾಗಿ 25 ಲಕ್ಷ ರೂ. ಪಡೆದಿದ್ದರು.
ಹಣ ಪಡೆದುಕೊಂಡಿದ್ದ ಆರೋಪಿಗಳು, ಕೆಲಸ ಕೊಡಿಸುವ ಆಮಿಷವೊಡ್ಡುತ್ತ ದಿನದೂಡಿದ್ದರು. ಆದರೆ, ಯಾವುದೆ ಕೆಲಸ ಕೊಡಿಸಿರಲಿಲ್ಲ. ಇದರಿಂದ ಬೇಸತ್ತ ದೂರುದಾರರು, ತಮ್ಮ ಹಣ ವಾಪಸು ಕೊಡುವಂತೆ ಪಟ್ಟು ಹಿಡಿದಿದ್ದರು. ಆಗ ಆರೋಪಿಗಳು, ಹಣ ವಾಪಸು ಕೊಡುವುದಾಗಿ ಹೇಳಿ ಚೆಕ್ ನೀಡಿದ್ದರು. ಆದರೆ, ಚೆಕ್ನಿಂದ ಯಾವುದೆ ಹಣ ಬಂದಿಲ್ಲ. ಇದರಿಂದ ಮತ್ತಷ್ಟು ನೊಂದ ದೂರುದಾರರು, ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಸುಧೀರ್, ಡಿಜಿ-ಐಜಿಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾನೆಯೋ ಅಥವಾ ಅದರ ಹೆಸರಿನಲ್ಲಿ ವಂಚನೆ ಮಾಡಿದ್ದಾನೆಯೋ ಎಂಬುದು ತನಿಖೆಯಿಂದ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.