

ಕಲಬುರಗಿ: 545 ಪಿಎಸ್ ಐ ನೇಮಕಾತಿ ಪರೀಕ್ಷಾ ಅಕ್ರಮದ ಕಳಂಕ ಹೊತ್ತಿರುವ ಕಲಬುರಗಿ ಜಿಲ್ಲೆಯಲ್ಲಿ ನಾಲ್ಕು ವರ್ಷದ ನಂತರ ನಗರದಲ್ಲಿ ಗುರುವಾರ ಬಿಗಿ ಬಂದೋಬಸ್ತ್ ಮಧ್ಯೆ 402 ಪಿಎಸ್ ಐ (ಸಿವಿಲ್) ಹುದ್ದೆಗೆ ಪರೀಕ್ಷೆ ಆಂಭವಾಗಿದೆ.
ನಗರದ 26 ಕೇಂದ್ರಗಳಲ್ಲಿ ಪರೀಕ್ಷೆ ಪ್ರಕ್ರಿಯೆ ಬೆಳಗ್ಗೆ 6ಗಂಟೆಯಿಂದಲೇ ಆರಂಭವಾಗಿದ್ದು, ಪರೀಕ್ಷೆ ಕೇಂದ್ರದ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಎಲ್ಲ ಅಂಗಡಿ, ಮುಂಗಟ್ಟು ಮುಚ್ಚಿಸಲಾಗಿದೆ.
ತೀವ್ರ ತಪಾಸಣೆ ನಡೆಸಿ, ಅಭ್ಯರ್ಥಿಗಳನ್ನು ಒಳಗೆ ಬಿಡಲಾಗುತ್ತಿದೆ. ಮಂಗಳಸೂತ್ರ ಮತ್ತು ಕಾಲುಂಗರ ಹೊರತುಪಡಿಸಿ, ಎಲ್ಲ ಆಭರಣಗಳನ್ನು ತೆಗೆಸಲಾಗುತ್ತಿದೆ.
2021ರಲ್ಲಿ 545 ಪಿಎಸ್ ಐ ಹುದ್ದೆಗೆ ನೇಮಕ ನಡೆದು, ಪರೀಕ್ಷಾ ಅಕ್ರಮ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು. ಅಕ್ರಮದ ಕೇಂದ್ರ ಕಲಬುರಗಿ ಜಿಲ್ಲೆಯಾಗಿದ್ದ ಹಿನ್ನೆಲೆಯಲ್ಲಿ ನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.