

ಬೆಳಗಾವಿ: ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದವರು ನಡೆಸುತ್ತಿರುವ ಹೋರಾಟ ತೀವ್ರರೂಪ ಪಡೆದುಕೊಂಡಿದ್ದು, ಮಂಗಳವಾರ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಚಾಜ್೯ ನಡೆಸಿದರು. ಮತ್ತೊಂದೆಡೆ ಕಲ್ಲು ತೂರಾಟದಿಂದ ಪ್ರತಿಭಟನಾಕಾರರು ಗಾಯಗೊಂಡಿದ್ದರು.
ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಸರ್ಕಾರ ಸ್ಪಂದಿಸದಿರುವ ಹಿನ್ನೆಲೆ ಸುವರ್ಣ ಸೌಧ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಮುಂದಾದ ವೇಳೆ ಪೊಲೀಸರು ತಡೆ ಹಿಡಿದರು. ಇದರಿಂದ ಗಲಾಟೆ ನಡೆಯಿತು. ಅಲ್ಲದೆ, ಪೊಲೀಸರು ಲಾಠಿಚಾಜ್೯ ನಡೆಸಿದರು. ಬಸ್, ಕಾರು ಸೇರಿದಂತೆ ಹಲವು ವಾಹನಗಳ ಮೇಲೆ ಕಲ್ಲು ತೂರಲಾಗಿದೆ. ಅನೇಕ ವಾಹನಗಳು ಜಖಂಗೊಂಡಿವೆ.