

ಆರ್.ತುಳಸಿಕುಮಾರ್
ಬೆಂಗಳೂರು: ಉದ್ದೇಶಿತ ಪೆರಿಫರಲ್ ರಿಂಗ್ ರಸ್ತೆ (ಪಿಆರ್‌ಆರ್) ಯೋಜನೆಗೆ ನಬಾರ್ಡ್ ಸಂಸ್ಥೆಯಿಂದ ಸಾಲ ಪಡೆಯುವ ಹಂತದಲ್ಲೇ, ಬಿಡಿಎ ನಿಗದಿ ಮಾಡಿರುವ ಹಳೆಯ ಭೂಪರಿಹಾರ ಮಾದರಿಗೆ ರೈತರು ತಗಾದೆ ಎತ್ತಿದ್ದಾರೆ. ಇದರಿಂದಾಗಿ ಸತತ 3-4 ವರ್ಷಗಳಿಂದ ಅಂತಿಮವಾಗದೆ ಉಳಿದಿರುವ ಪರಿಹಾರ ನಿಗದಿ ಹಾಗೂ ವಿತರಣೆ ಮತ್ತೆ ಕಗ್ಗಂಟಾಗಿ ಮಾರ್ಪಟ್ಟಿದೆ.
ಯೋಜನೆಗೆ ಜಮೀನು ಬಿಟ್ಟುಕೊಡಲಿರುವ ರೈತರಿಗೆ ಪರಿಹಾರ ನೀಡಿಯೇ ಕಾಮಗಾರಿ ಆರಂಭಿಸುವುದಾಗಿ ಸರ್ಕಾರ ವಾಗ್ದಾನ ನೀಡಿದೆ. ಇದಕ್ಕೆ ಆರಂಭದಲ್ಲಿ ದನಿಗೂಡಿಸಿದ್ದ ಬಿಡಿಎ ಕ್ರಮೇಣ ತನ್ನ ನಿಲುವಿನಿಂದ ಹಿಂದೆ ಸರಿಯುತ್ತಿರುವುದು ರೈತರನ್ನು ಸಿಟ್ಟಿಗೆಬ್ಬಿಸಿದೆ. ಈ ವಿಚಾರದಲ್ಲಿ ಪ್ರಾಧಿಕಾರವು ರೈತರ ಸಲಹಗಳನ್ನು ಒಪ್ಪಲು ಸಿದ್ಧರಿಲ್ಲ. ಹಾಗಾಗಿ ಭೂಪರಿಹಾರ ನಿಗದಿ ಮಾಡದಿರುವ ಕಾರಣ ಇಡೀ ಪ್ರಾಜೆಕ್ಟ್ ತೂಗುಯ್ಯಲೆಯಲ್ಲಿದೆ.
ಸಭೆಗೆ ರೈತರ ಬಹಿಷ್ಕಾರ:
ಭೂಪರಿಹಾರ ಸಂಬಂಧ ಬಿಡಿಎ ಯೋಜನೆಗೆ ಜಮೀನು ಬಿಟ್ಟುಕೊಡಲಿರುವ ಹಳ್ಳಿಗಳಿಗೆ ತೆರಳಿ ರೈತರನ್ನು ಮನವೋಲಿಸಲು ಸಂಧಾನ ಸಭೆ ಆಯೋಜಿಸುತ್ತಿದೆ. ಹಳೆಯ ಹಾಗೂ ಹೊಸ ಕಾಯ್ದೆ ಬದಲು ರೈತರಿಗೆ ಒಪ್ಪಿಕೊಳ್ಳಬಹುದಾದ ಮೊತ್ತವನ್ನು ವಿತರಿಸುವ ವಾಗ್ದಾನ ನೀಡುತ್ತಿದೆ. ಇಂತಹ ಸಭೆಗಳು ಕಳೆದೊಂದು ವಾರದಿಂದ ಹುಸ್ಕೂರು, ಕೋಗಿಲು, ಸೂಲಿಕುಂಟೆ, ಮಾದನಾಯಕನಹಳ್ಳಿ ನಡೆದಿದೆ. ಆದರೆ, ಆ ಸಭೆಗಳಲ್ಲಿ ಪ್ರಾಧಿಕಾರದ ಅಧಿಕಾರಿಗಳ ಸಲಹೆಯನ್ನು ರೈತರು ಒಪ್ಪಿಲ್ಲ. ಶನಿವಾರ (ಡಿ.21) ಯಲಹಂಕ ಬಳಿಯ ಮಾವಳ್ಳಿಪುರದಲ್ಲಿ ಸಭೆ ನಡೆಸಲು ಆಗಮಿಸಿದ್ದ ಅಧಿಕಾರಿಗಳ ಸಭೆಗೆ ಯಾವೊಬ್ಬ ರೈತರು ಹಾಜರಾಗಿಲ್ಲ. ಬದಲಾಗಿ ಮುಂದಿನ ಎಲ್ಲ ಸಭೆಗಳನ್ನು ಬಹಿಷ್ಕರಿಸಿ ಸಂಪುಟದಲ್ಲಿ ಒಪ್ಪಿರುವ ಭೂಪರಿಹಾರ ಸೂತ್ರವನ್ನು ಜಾರಿ ಮಾಡುವಂತೆ ಒತ್ತಾಯಿಸಿದ್ದಾರೆ.
ಸಂಪುಟ ನಿರ್ಧಾರ ಬದಲಿಸಿದ ಇಲಾಖೆ:
ಕಳೆದ ಸೆ.5ರಂದು ನಡೆದಿದ್ದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪಿಆರ್‌ಆರ್ ಜಾರಿಗೆ ಅನುಮೋದನೆ ನೀಡಲಾಗಿದೆ. ಜತೆಗೆ ಭೂಪರಿಹಾರವನ್ನು 2013ರ ಕಾಯ್ದೆ ಅಡಿಯಲ್ಲಿ ವಿತರಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಇದಾಗಿ ಕೆಲ ದಿನಗಳಲ್ಲೇ ನಗರಾಭಿವೃದ್ಧಿ ಇಲಾಖೆಯು ಆದೇಶ ಹೊರಡಿಸಿ ನಗದು/ಟಿಡಿಆರ್ ಮಾದರಿಯಲ್ಲಿ ಪರಿಹಾರ ವಿತರಿಸುವುದಾಗಿ ತಿಳಿಸಿತ್ತು. ಆದರೆ, ಸೆ.21ರ ತಿದ್ದುಪಡಿ ಆದೇಶದಲ್ಲಿ 1894ರ ಕಾಯ್ದೆಯಡಿ ಪರಿಹಾರ ನಿಗದಿಗೊಳಿಸಿ ರೈತರೊಂದಿಗೆ ಸಂಧಾನ ಸಭೆ ನಡೆಸಿ ಮನವೋಲಿಕೆಗೆ ಅವಕಾಶ ಮಾಡಿಕೊಟ್ಟಿತು. ಇದನ್ನಾಧರಿಸಿ ಬಿಡಿಎ ಈಗ ಪಿಆರ್‌ಆರ್ ಹಾದುಹೋಗುವ ಹಳ್ಳಿಗಳಲ್ಲಿ ರೈತರನ್ನು ಮನವೋಲಿಸಲು ಸಭೆಗಳನ್ನು ಮಾಡುತ್ತಿದೆ. ಇದಕ್ಕೆ ಸರ್ಕಾರ ಅಧಿಕೃತವಾಗಿ ಒಪ್ಪಿದೆಯೆ ಎಂಬ ರೈತರ ಪ್ರಶ್ನೆಗೆ ಉತ್ತರಿಸಲು ಪ್ರಾಧಿಕಾರದ ಅಧಿಕಾರಿಗಳು ಸಿದ್ಧರಿಲ್ಲದ ಕಾರಣ ಯಾವ ನಿಯಮ ಅಡಿಯಲ್ಲಿ ಭೂಪರಿಹಾರ ನಿಗದಿಯಾಗಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಹೈಕೋರ್ಟ್‌ನಲ್ಲಿ ವಿಚಾರಣೆ ಬಾಕಿ:
ಪಿಆರ್‌ಆರ್ ವಿಳಂಬದಿಂದಾಗಿ ಇಡೀ ಯೋಜನೆಯನ್ನೇ ರದ್ದುಪಡಿಸಬೇಕು ಇಲ್ಲವೇ 2013ರ ಕಾಯ್ದೆಯಡಿ ಭೂಪರಿಹಾರ ವಿತರಿಸಲು ನಿರ್ದೇಶನ ಕೋರಿ ಹಲವು ರೈತರು ಹೈಕೋರ್ಟ್ ಮೆಟ್ಟಿಲು ಹೇರಿದ್ದಾರೆ. ಪ್ರಕರಣ ಸುಪ್ರೀಂಕೋರ್ಟ್‌ನಲ್ಲೂ ವಿಚಾರಣೆಯಾಗಿ ಎಲ್ಲ ಪ್ರಕರಣಗಳನ್ನು ಹೈಕೋರ್ಟ್ ಇತ್ಯರ್ಥಪಡಿಸಲು ಸೂಚಿಸಿದೆ. ಆದರೆ, ಇವರೆಗೂ ಸರ್ಕಾರ ಹಾಗೂ ಬಿಡಿಎ ಸಂಪುಟದಲ್ಲಿ ಕೈಗೊಂಡಿರುವ ನಿರ್ಧಾರದ ಬಗ್ಗೆ ಕೋರ್ಟ್‌ಗೆ ಮಾಹಿತಿ ನೀಡಿಲ್ಲ. ಸಂಧಾನದ ಮೂಲಕ ಹೊಸ ಮಾದರಿಯಲ್ಲಿ ಭೂಪರಿಹಾರ ನಿಗದಿ ಮಾಡುವ ಪ್ರಸ್ತಾಪದ ಬಗ್ಗೆಯೂ ಮೆಮೊ ಸಲ್ಲಿಸದಿರುವುದು ಅಧಿಕಾರಿಗಳ ದ್ವಂದ್ವಕ್ಕೆ ರೈತ ಸಂಘಟನೆಗಳು ಅಕ್ಷೇಪ ವ್ಯಕ್ತಪಡಿಸಿವೆ.
ಪಿಆರ್‌ಆರ್ ಯೋಜನೆಗೆ ರೈತರ ವಿರೋಧ ಇಲ್ಲ. ದಶಕದಿಂದ ಭೂಪರಿಹಾರ ನಿಗದಿ ಮಾಡಿ ವಿತರಿಸದ ಸರ್ಕಾರ ಹಾಗೂ ಬಿಡಿಎ ನಿಲುವಿಗಷ್ಟೇ ನಮ್ಮ ಆಕ್ಷೇಪ ಇದೆ. ಸಂಪುಟದಲ್ಲಿ ನಿರ್ಣಯ ಕೈಗೊಂಡಂತೆ 2013ರ ಕಾಯ್ದೆ ಅನ್ವಯ ಪರಿಹಾರ ನೀಡದಿದ್ದರೆ ಯೋಜನೆಗೆ ಜಮೀನು ನೀಡುವುದಿಲ್ಲ. ಬಿಡಿಎ ಆಯೋಜಿಸಿರುವ ಸಂಧಾನ ಸಭೆ ಬಹಿಷ್ಕರಿಸಿದ್ದು, ಸರ್ಕಾರ ಮಧ್ಯಪ್ರವೇಶ ಮಾಡಿ ಸಮಸ್ಯೆ ಇತ್ಯರ್ಥಗೊಳಿಸಲಿ.
- ಮಾವಳ್ಳಿಪುರ ಶ್ರೀನಿವಾಸ್, ಅಧ್ಯಕ್ಷ, ಪಿಅರ್‌ಆರ್ ರೈತ ಹಾಗೂ ಸೈಟ್‌ದಾರರ ಸಂಘ