

ಬೆಂಗಳೂರು: ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್) ಯೋಜನೆಯ ಸಂತ್ರಸ್ತ ರೈತರಿಗೆ ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯ್ದೆ ಅನ್ವಯ ಪರಿಹಾರ ವಿತರಿಸುವಂತೆ ಕೋರಿ ಪಿಆರ್‌ಆರ್ ರೈತ ಹಾಗೂ ನಿವೇಶನದಾರರ ಸಂಘ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದೆ.
ಕಳೆದ ವಾರ ರಾಜ್ಯ ಸಂಪುಟ ಸಭೆಯಲ್ಲಿ ಪಿಆರ್‌ಆರ್‌ಗೆ ಬಿಬಿಸಿ ಎಂಬುದಾಗಿ ಹೆಸರು ಮಾರ್ಪಡಿಸಿ ಐದು ವಿಧದ ಪರಿಹಾರ ಸೂತ್ರದಡಿ ಪರಿಹಾರ ವಿತರಿಸಲು ನಿರ್ಧರಿಸಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ರೈತರು, ತಮಗೆ ಕೇಂದ್ರ ಸರ್ಕಾರದ ಪರಿಹಾರ ಹಾಗೂ ಪುನರ್ವಸತಿ ಕಾಯ್ಡೆ 2013ರ ನಿಯಮವನ್ನು ಅನ್ವಯಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹಾಗಾಗಿ ಸಂಪುಟ ತೀರ್ಮಾನ ವಿರೋಧಿಸಿ ರೈತರು ನ್ಯಾಯಕೋರಿ ರಾಜಭವನದ ಕದ ತಟ್ಟಿದ್ದಾರೆ.
ಈ ಸಂಬಂಧ ರಾಜಪಾಲರಿಗೆ ಸೋಮವಾರ ಮನವಿಪತ್ರ ಸಲಲಿಸಿದ ಬಳಿಕ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಾವಳ್ಳಿಪುರ ಶ್ರೀನಿವಾಸ್, ಹದಿನೆಂಟು ವರ್ಷಗಳ ಹಿಂದೆ ಘೋಷಿಸಿರುವ ಪಿಆರ್‌ಆರ್ ಯೋಜನೆಗೆ ಭೂಮಿ ಕಳೆದುಕೊಳ್ಳಲಿರುವ ರೈತರಿಗೆ ಈವರೆಗೂ ಪರಿಹಾರ ನೀಡಿಲ್ಲ. ದಶಕದಿಂದ ಪರಿಹಾರ ನಿಗದಿ ಮಾಡುವಲ್ಲಿಯೇ ಸಮಯ ದೂಡುತ್ತಾ ಬಂದಿರುವ ಬಿಡಿಎ, ಈಗ ಬೆಂಗಳೂರು ಬಿಜಿನೆಸ್ ಕಾರಿಡಾರ್ (ಬಿಬಿಸಿ) ಹೆಸರಿನಲ್ಲಿ ಪ್ರಾಜೆಕ್ಟ್ ಜಾರಿಗೆ ಮುಂದಾಗಿದೆ. ಆದರೆ, ನ್ಯಾಯಯುತ ಪರಿಹಾರ ನೀಡಲು ಒಪ್ಪದೆ ಏಕಪಕ್ಷೀಯವಾಗಿ ಪರಿಹಾರ ನಿಗದಿ ಮಾಡಿ ಅನ್ನದಾತರಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.
ನಿರ್ದೇಶನಕ್ಕೆ ಕೋರಿಕೆ:
ಪಿಆರ್‌ಆರ್ ಯೋಜನೆಯನ್ನು ಬಿಡಿಎ 1894ರ ನಿಯಮದಂತೆ ಪ್ರಕಟಿಸಲಾಗಿದೆ. ಆದರೆ, ಈ ಯೋಜನೆ ನಿಯಮದಂತೆ ಐದು ವರ್ಷದೊಳಗೆ ಕಾರ್ಯಗತ ಮಾಡದಿದ್ದಲ್ಲಿ ಪ್ರಾಜೆಕ್ಟ್ ರದ್ದಾಗುತ್ತದೆ ಎಂದು ನಿಯಮದಲ್ಲೇ ಉಲ್ಲೇಖಿಸಲಾಗಿದೆ. ಪ್ರಸ್ತುತ 18 ವರ್ಷ ಮೀರಿರುವ ಕಾರಣ ಯೋಜನೆ ಜಾರಿ ಮಾಡುವಂತಿಲ್ಲ. ಈ ತಪ್ಪನ್ನು ಮುಚ್ಚಿಕೊಳ್ಳಲು ಬಿಡಿಎ ಹೊಸ ಹೆಸರಿಟ್ಟಿ ಹಳೆಯ ನಿಯಮದಡಿ ಪರಿಹಾರ ನೀಡಲು ಹೊರಟಿದೆ. ಇದಕ್ಕೆ ರೈತರು ಒಪ್ಪಿಗೆ ಸೂಚಿಸಿಲ್ಲ. ಕೇಂದ್ರದ 2013ರ ಭೂಸ್ವಾಧೀನ ಅಡಿಯಲ್ಲಿ ಪರಿಹಾರ ವಿತರಿಸುವಂತೆ ಬಿಡಿಎಗೆ ನಿರ್ದೇಶನ ನೀಡುವಂತೆ ರಾಜ್ಯಪಾಲರನ್ನು ಕೋರಲಾಗಿದೆ ಎಂದರು.
ಎರಡು ದಶಕದಿಂದ ನೆನೆಗುದಿಗೆ ಬಿದ್ದಿರುವ ಪಿಆರ್‌ಆರ್ ಯೋಜನೆ ಜಾರಿಗೆ ರೈತರ ವಿರೋಧ ಇಲ್ಲ. ಆದರೆ, ಸೂಕ್ತ ರೀತಿಯಲ್ಲಿ ಪರಿಹಾರ ನೀಡದೆ ಮೂಗಿಗೆ ತುಪ್ಪ ಹಚ್ಚುವ ರೀತಿಯಲ್ಲಿ ಹಣ ನೀಡಿದರೆ ಯಾವುದೇ ಕೃಷಿಕರು ಹಾಗೂ ಭೂಮಾಲೀಕರು ತಮ್ಮ ಜಮೀನನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಈ ಅಂಶವನ್ನು ಮನಗಾಣದ ಬಿಡಿಎ ಅಧಿಕಾರಿಗಳು ಸರ್ಕಾರಕ್ಕೆ ಪ್ರತಿ ಬಾರಿಯೂ ತಪ್ಪು ಮಾಹಿತಿ ನೀಡಿ ಪ್ರಾಜೆಕ್ಟ್‌ಅನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಶ್ರೀನಿವಾಸ್ ಆರೋಪಿಸಿದರು.
ಸಂಘದ 4 ಬೇಡಿಕೆಗಳಿವು:
* ಬಿಡಿಎ ಕಾಯ್ದೆ 1894ರ ಸೆಕ್ಷನ್ 27ರ ಪ್ರಕಾರ 5 ವರ್ಷದ ಅವಧಿ ಮುಕ್ತಾಯವಾಗಿದ್ದು, ಪಿಆರ್‌ಆರ್-1 ಯೋಜನೆ ರದ್ದುಗೊಳಿಸಬೇಕು.
* ಕೇಂದ್ರದ 2013ರ ಭೂಸ್ವಾಧೀನ ಕಾಯ್ದೆಯನ್ನು ಅಳವಡಿಸಿಕೊಳ್ಳುವಂತೆ ಬಿಡಿಎ ನಿರ್ದೇಶನ ನೀಡಬೇಕು.
* ಆರ್ಟಿಕಲ್ 300ಎ ಮತ್ತು 74ನೇ ತಿದ್ದುಪಡಿ ಸೇರಿ ಸಾಂವಿಧಾನಿಕ ನಿಬಂಧನೆಗಳ ಉಲ್ಲಂಘನೆ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು.
* ಈ ಮೂರು ಅಂಶವನ್ನು ಬಿಡಿಎ ಒಪ್ಪದಿದ್ದಲ್ಲಿ ಯೋಜನೆಗೆ ಗುರುತಿಸಿರುವ ಜಮೀನನ್ನು ರೈತರಿಗೆ ಹಿಂದಿರುಗಿಸಿ ಎನ್‌ಒಸಿ ನೀಡಬೇಕು.