

ನಾಪೋಕ್ಲು : ಜನರು ಸೇವಾ ಮನೋಭಾವನೆ ಬೆಳೆಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಲಯನ್ಸ್ ಕ್ಲಬ್‌ನ ಜಿಲ್ಲಾ ಪ್ರಾಂತಪಾಲೆ ಬಿ.ಎಂ.ಭಾರತಿ ಹೇಳಿದರು.
ಇಲ್ಲಿನ ಕೊಡವ ಸಮಾಜದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ಲಯನ್ಸ್ ಕ್ಲಬ್‌ಗೆ ಪ್ರಾಂತಪಾಲರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
1907ರಲ್ಲಿ ಸ್ಥಾಪಿತವಾದ ಲಯನ್ಸ್ ಸಂಸ್ಥೆ ದೇಶಾದ್ಯಂತ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ. 200 ದೇಶಗಳಲ್ಲಿ ಹಲವಾರು ಘಟಕಗಳನ್ನು ಹೊಂದಿದ್ದು, ಸಹಸ್ರಾರು ಸದಸ್ಯರು ಇದ್ದಾರೆ. ಪ್ರತಿಯೊಬ್ಬರೂ ಸೇವಾ ಮನೋಭಾವನೆಯನ್ನು ರೂಢಿಸಿಕೊಂಡಿರುವುದು ಹೆಮ್ಮೆಯ ವಿಚಾರ ಎಂದರು.
ಮನುಷ್ಯರಿಗೆ ತನು, ಮನ, ಧನ ಇದ್ದರೆ ಸಾಲದು. ಸೇವಾ ಮನೋಭಾವವೂ ಇರಬೇಕು. ಹಿಂದಿನ ತಲೆಮಾರಿನಿಂದ ಇದು ನಡೆದುಕೊಂಡು ಬಂದಿದೆ. ಸಂಸ್ಥೆಗೆ ಹೆಚ್ಚು ಸದಸ್ಯರನ್ನು ಸೇರ್ಪಡೆಗೊಳಿಸಿ ಸಂಸ್ಥೆಯನ್ನು ಬಲಪಡಿಸಬೇಕು ಎಂದರು.
ಮನುಷ್ಯ ದುಡಿದು ಗಳಿಸಿದ್ದನ್ನು ಖರ್ಚು ಮಾಡುವುದಿಲ್ಲ. ಕೂಡಿಟ್ಟ ಹಣ ಪರರ ಪಾಲಾಗುತ್ತದೆ. ಜೀವನದಲ್ಲಿ ಅಲ್ಪ ಪ್ರಮಾಣದಲ್ಲಿ ಸೇವೆ ಮಾಡಬೇಕಾದದ್ದು ಅತ್ಯಗತ್ಯ ಎಂದರು.
ಲಯನ್ಸ್ ಸಂಸ್ಥೆಯ ಅಧ್ಯಕ್ಷ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಕ್ಕಾಟಿರ ವಿನಯ್ ಧ್ವಜವಂದನೆ ನೆರವೇರಿಸಿದರು. ಕ್ಲಬ್ ನೂತನ ಸದಸ್ಯರಾಗಿ ಚೇಯ್ಯಂಡ ರಘು ತಿಮ್ಮಯ್ಯ, ಕಸ್ತೂರಿ ತಿಮ್ಮಯ್ಯ ಅವರನ್ನು ಸೇರ್ಪಡೆಗೊಳಿಸಿ ಅವರಿಗೆ ಪ್ರಮಾಣ ವಚನ ಬೋಧಿಸಲಾಯಿತು. ಸದಸ್ಯರಿಗೆ ಅರ್ಹತಾ ಪತ್ರ ವಿತರಿಸಿ ಗೌರವಿಸಿ ಅಭಿನಂದಿಸಲಾಯಿತು.
ಲಯನ್ಸ್ ಸಂಸ್ಥೆಯ ಹಿರಿಯ ಸದಸ್ಯರಾದ ಕುಂಡಿಯೊಳಂಡ ರಮೇಶ್ ಮುದ್ದಯ್ಯ ಹಾಗೂ ಬಿ.ಎಂ.ಭಾರತೀ ಅವರನ್ನು ಸನ್ಮಾನಿಸಲಾಯಿತು.
ಸಂಘಟನಾ ಕಾರ್ಯದರ್ಶಿ ಗೀತಾ ರಾವ್, ಪ್ರಾಂತೀಯ ಅಧ್ಯಕ್ಷ ಕನ್ನಿಕಾ ಅಯ್ಯಪ್ಪ, ವಲಯ ಅಧ್ಯಕ್ಷರಾದ ಕನ್ನಂಡ ಬೊಳ್ಳಪ್ಪ ಸುಮಂತ್, ಪ್ರಾಂತೀಯ ರಾಯಭಾರಿ ಮೋಹನ್ ದಾಸ್, ಕಾರ್ಯದರ್ಶಿ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ಖಜಾಂಚಿ ಕಾಂಡಂಡ ರೇಖಾ ಪೊನ್ನಣ, ಲಿಯೋ ಕ್ಲಬ್ ಅಧ್ಯಕ್ಷೆ ಪಿ.ಎಂ.ಅಬೀಬ, ಕಾರ್ಯದರ್ಶಿ ಬಿ.ಸಿ.ನವಲ್ ನಾಚಪ್ಪ ಸೇರಿದಂತೆ ಲಯನ್ಸ್ ಸಂಸ್ಥೆ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೂ ಮೊದಲು ಲಯನ್ಸ್ ಸಂಸ್ಥೆ ವತಿಯಿಂದ 4 ಕಡೆ ಶಾಲಾ ಆವರಣದಲ್ಲಿ ನಿರ್ಮಿಸಲಾಗಿದ್ದ ರಸ್ತೆ ಸೂಚನಾ ಫಲಕಗಳನ್ನು ಉದ್ಘಾಟಿಸಲಾಯಿತು.