ನೊಂದ ಕುಟುಂಬಕ್ಕೆ ಪರಿಹಾರ ಕೊಡಿಸಲಿ: ಪ್ರಾಂತ ಕೃಷಿ ಕೂಲಿಕಾರರ ಪ್ರತಿಭಟನೆ

Provincial agricultural laborers protest Mandya
Published on

ಮಂಡ್ಯ: ರಾಮನಗರ ಜಿಲ್ಲೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವವರನ್ನು ಬಂಧಿಸಬೇಕು. ಜತೆಗೆ ನೊಂದ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮಹಿಳಾ ಕೃಷಿ ಕೂಲಿಕಾರರ ಉಪ ಸಮಿತಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಾಲಕಿಯನ್ನ ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ಇಡೀ ದೇಶವೇ ತಲೆತಗ್ಗಿಸುವಂತಿದೆ. ಇದರಲ್ಲಿ ಪೊಲೀಸ್ ವಿಫಲವೂ ಎದ್ದು ಕಾಣುತ್ತದೆ. ನ್ಯಾಯ ಕೇಳಲು ಹೋದ ಪ್ರತಿಭಟನಾಗಾರರ ಮೇಲೆ ಹಲ್ಲೆ ನಡೆಸಲು ಮುಂದಾಗುವುದು ಏಕೆ, ಇದು ಹೀಗೆ ಮುಂದುವರಿದರೆ ಪ್ರತಿಭಟನೆ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಣೆಯಾದ ಬಾಲಕಿಯ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಲಾಗಿದೆ. ಆದರೆ ಪೊಲೀಸರು ದೂರು ಸ್ವೀಕರಿಸುವುದಿಲ್ಲ. ಮರುದಿನ ರೈಲ್ವೆ ಸ್ಟೇಷನ್ ಬಳಿ ಶವವಾಗಿ ಸಿಕ್ಕ ಬಾಲಕಿಯ ಮೃತದೇಹದ ಮರಣ ಪರೀಕ್ಷೆಯನ್ನು ಕೊಡುವುದಿಲ್ಲ, ಇದು ಸಾಲದೆಂಬಂತೆ ಅತ್ಯಾಚಾರಿಗಳನ್ನು ಬಂಧಿಸಿಲ್ಲ. ಇಷ್ಟೆಲ್ಲಾ ಅವಾಂತರಗಳು ನಡೆಯುತ್ತದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸುಮ್ಮನಿರುವುದು ಏಕೆ ಎಂದು ಕಿಡಿಕಾರಿದರು.

ಇನ್ನಾದರೂ ಆ ನೊಂದ ಕುಟುಂಬಕ್ಕೆ ಪರಿಹಾರ ನೀಡುವ ಮೂಲಕ ಸರ್ಕಾರ ಸಾಂತ್ವನ ಹೇಳಬೇಕು. ಪೊಲೀಸರು ನಡೆಸಿರುವ ದೌರ್ಜನ್ಯದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಜತೆಗೆ ಪೊಲೀಸರು ನಿರ್ಲಕ್ಷೃತನವನ್ನು ತೋರಿದ್ದು ಈ ಪ್ರಕರಣವನ್ನು ಮುಚ್ಚಿಹಾಕಲು ಬಿಡದಿ ಪೊಲೀಸರು ನಿಂತಿದ್ದು ಅವರ ವಿರುದ್ಧವೂ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಮುಖಂಡರಾದ ಅಮಾಸಯ್ಯ, ರಾಮಯ್ಯ, ಶಿವಕುಮಾರ್, ಟಿ.ಎಚ್.ಆನಂದ್, ಕಪನಿಗೌಡ, ಲಕ್ಷ್ಮೀ ಕುಂತೂರು, ಗೌರಮ್ಮ, ನಂಜೇಗೌಡ, ಮಂಚೇಗೌಡ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net