

ಮಂಡ್ಯ: ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಮಹಿಳಾ ಕೃಷಿ ಕೂಲಿಕಾರರ ಉಪಸಮಿತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸರ್ಎಂವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಕೃಷಿ ಕೂಲಿಕಾರರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಿದರು. ಸಂಸದ ಪ್ರಜ್ವಲ್ ರೇವಣ್ಣ ನಡೆಸಿರುವುದು ಲೈಂಗಿಕ ಹತ್ಯಾಕಾಂಡವಾಗಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಲೈಂಗಿಕ ಕ್ರಿಯೆಗಳನ್ನು ನಡೆಸಿರುವ ಸುಮಾರು 2,900 ವೀಡಿಯೋಗಳನ್ನು ಮತ್ತು ಪೋಟೋಗಳನ್ನು ಸೆರೆ ಹಿಡಿದಿಟ್ಟುಕೊಂಡಿರುವುದಂತೂ ಅತ್ಯಂತ ಖಂಡನೀಯವಾಗಿದೆ. ಸಂತ್ರಸ್ತರು ದೂರು ನೀಡದಂತೆ ಬೆದರಿಸುವುದು, ಅಪಹರಿಸುವುದು ಘನ ಘೋರ ಅಪರಾಧವಾಗಿದೆ ಎಂದು ಖಂಡಿಸಿದರು.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ಚಿತ್ರೀಕರಣ ಮಾಡಿರುವ ಸಂಸದ ಪ್ರಜ್ವಲ್ ರೇವಣ್ಣನನ್ನು ಪತ್ತೆ ಮಾಡಿ ತಕ್ಷಣ ಬಂಧಿಸಬೇಕು. ಆತನ ವಿರುದ್ಧ ಐಟಿ, ಐಪಿಸಿ ಹಾಗೂ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿ ಅವರ ಕುಟುಂಬದವರಿಗೆ ಕಿರುಕುಳ, ಪ್ರಾಣಭಯ, ತೊಂದರೆ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಎಸ್ಐಟಿ ತನಿಖೆಯನ್ನು ಕಾಲ ಮಿತಿಯೊಳಗೆ ಮುಗಿಸಬೇಕು. ತನಿಖೆಯ ಕಾಲಮಿತಿಯನ್ನು ಸರ್ಕಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಪರಾರಿಯಾಗಲು ಅವಕಾಶ ಕಲ್ಪಿಸಿರುವ ಕೇಂದ್ರ ಗೃಹ ಇಲಾಖೆ ಮತ್ತು ಗುಪ್ತಚರ ವಿಭಾಗದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಆರೋಪಿಯೊಬ್ಬನ ಪರಾರಿ ಹೊಣೆಯನ್ನು ಕೇಂದ್ರ ಎನ್ಡಿಎ ಸರ್ಕಾರ ಹೊಣೆ ಹೊತ್ತು ದೇಶದ ಜನರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು, ಸರೋಜಮ್ಮ, ಹನುಮೇಶ್, ಎನ್.ಸುರೇಂದ್ರ, ಅಮಾಸಯ್ಯ, ಆರ್.ರಾಜು, ರಾಮಣ್ಣ ತಳಗವಾದಿ, ಕಪನಿಗೌಡ ಸುಜ್ಜಲೂರು, ಮಲ್ಲೇಶ, ಶಿವಲಿಂಗಯ್ಯ, ನಾಗಮ್ಮ, ಅಬ್ದುಲ್ಲಾ ಇತರರಿದ್ದರು.