

ಮಂಡ್ಯ: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಸಿಐಟಿಯು, ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಪ್ರಾಂತ ರೈತ ಸಂಘದ ಸಹಯೋಗದಲ್ಲಿ ನ.26 ರಿಂದ 28ರವರೆಗೆ 72 ಗಂಟೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಹಾಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾಧು ತಿಳಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಆಕ್ರಮಣಕಾರಿಯಾಗಿ ರೂಪಿಸುತ್ತಿರುವ ಕಾರ್ಪೋರೇಟ್ ಬಂಡವಾಳರ ಪರ ನವ ಉದಾರವಾದಿ ನೀತಿಗಳು ದೇಶದ ದುಡಿಯುವ ವರ್ಗದ ಜನರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ವಿದ್ಯುತ್, ರೈಲ್ವೆ, ಕಲ್ಲಿದ್ದಲು, ದೂರಸಂಪರ್ಕ, ವಿಮಾಕ್ಷೇತ್ರ, ವಿಮಾನಯಾನ, ರಕ್ಷಣಾ ಸಾಮಗ್ರಿ ಉತ್ಪಾದನಾ ಕೈಗಾರಿಕೆ ಸೇರಿದಂತೆ ಅಗತ್ಯ ವಲಯಗಳಾದ ಆರೋಗ್ಯ, ಶಿಕ್ಷಣ, ಸಾರಿಗೆ, ಆಹಾರ, ನೀರು ಭೂಮಿ, ಗಣಿ, ಅರಣ್ಯ ಎಲ್ಲವನ್ನೂ ಕಾರ್ಪೋರೇಟ್ ವಲಯಕ್ಕೆ ಹಸ್ತಾಂತರಿಸಿ ಸೇವೆಯನ್ನು ಸರಕಾಗಿಸಲು ಹೊರಟಿದೆ. ರೈತರ ಉತ್ಪನ್ನಗಳಿಗೆ ಸ್ವಾಮಿನಾಥನ್ ಶಿಫಾರಸ್ಸಿನಂತೆ ಕನಿಷ್ಟ ಬೆಂಬಲ ಬೆಲೆ ಹಾಗೂ ಖರೀದಿ ಖಾತ್ರಿ ಶಾಸನ ಜಾರಿಗೊಳಿಸಬೇಕು. ರಾಷ್ಟ್ರೀಯ ಕನಿಷ್ಠ ವೇತನ 26 ಸಾವಿರ ನಿಗದಿ, ಪಿಎಂ ಫಸಲ್‌ಭೀಮಾ ಯೋಜನೆಯನ್ನು ರದ್ದುಪಡಿಸಿ, ಎಲ್ಲಾ ಬೆಳೆಗಳಿಗೂ ವಿಮೆ ಒದಗಿಸುವ ಸಮಗ್ರ ಸಾರ್ವಜನಿಕ ವಿಮಾ ಯೋಜನೆ ಜಾರಿಗೊಳಿಸಿ ಸಾಲ ಮನ್ನಾ ಯೋಜನೆ ರೂಪಿಸಬೇಕು ಸೇರಿದಂತೆ 24 ಹಕ್ಕೊತ್ತಾಯದೊಂದಿಗೆ ಮಹಾಧರಣಿ, ರಾಜಭವನ ಚಲೋ ಮಾಡಲಾಗುವುದು ಎಂದು ಹೇಳಿದರು.
ವಿವಿಧ ಸಂಘಟನೆಯ ಎಂ.ಎಂ. ಶಿವಕುಮಾರ್, ಸಿ.ಕುಮಾರಿ, ಬಿ.ಹನುಮೇಶ್, ಎನ್.ಎಲ್.ಭರತ್‌ರಾಜ್, ನಂದೀಶ್ ಇದ್ದರು.