ಗುಣಮಟ್ಟದ ಶಿಕ್ಷಣ ನೀಡುವುದು ಮುಖ್ಯ

Providing quality education is important
Providing quality education is important
Published on

ಮುಧೋಳ: ಮಕ್ಕಳಿಗೆ ಮೌಲ್ಯಯುತ ಗುಣಮಟ್ಟದ ಶಿಕ್ಷಣ ನೀಡಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ಕಾರಣಕರ್ತರಾಗಿರುವ ಅರಳಿಕಟ್ಟಿಯವರ ಕಾರ್ಯ ಶ್ಲಾಘನೀಯ ಎಂದು ಚಿತ್ರನಟಿ ಶೃತಿ ಹೇಳಿದರು.

ಸೋಮವಾರ ನಗರದ ರಾಯಲ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ನಾಲ್ಕನೆಯ ವಾರ್ಷಿಕೋತ್ಸವ ಆವಿಷ್ಕಾರ-4ರ ಸಮಾರಂಭದಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಭಾಗದಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣವನ್ನು ಮುಧೋಳಕ್ಕೆ ತಂದ ಕೀರ್ತಿ ಅರಳಿಕಟ್ಟಿ ಅವರಿಗೆ ಸಲ್ಲುತ್ತದೆ ಎಂದರು.

ಬ್ಯಾಂಕಿಂಗ್ ಹಾಗೂ ಶಿಕ್ಷಣ ಕಡಿಮೆ ಖರ್ಚಿನಲ್ಲಿ ಗ್ರಾಮೀಣ ಭಾಗದ ಮಕ್ಕಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳಲ್ಲಿ ಸಾಮಾಜಿಕ ಪರಿಜ್ಞಾನ ಮೂಡಿಸುವ ಅರಳಿಕಟ್ಟಿಯವರ ಕಾರ್ಯ ಅಮೋಘ. ವಿದ್ಯೆಯೊಂದಿಗೆ ಮಕ್ಕಳಿಗೆ ಸಂಸ್ಕಾರ ಕಲಿಸುವುದು ಉತ್ತಮ ಕಾರ್ಯ ಎಂದರು.

ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡುತ್ತಿರುವುದು ಅನುಕರಣೀಯ. ಒಳ್ಳೆಯ ಶಾಲೆಗೆ ಮಕ್ಕಳನ್ನು ಸೇರಿಸಿದ ಕೂಡಲೇ ಪಾಲಕರ ಜವಾಬ್ದಾರಿ ಮುಗಿಯುವುದಿಲ್ಲ. ಮನೆಯಲ್ಲಿ ಮಕ್ಕಳಿಗೆ ಓದುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.

ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಓರ್ವ ಮನುಷ್ಯ ಪಾದರಸದಂತೆ ನಿರಂತರವಾಗಿ ಕರ್ತವ್ಯ ನಿರತನಾದರೆ ಯಾವುದೇ ರಂಗವನ್ನು ಶ್ರೀಮಂತಗೊಳಿಸಬಹು ಎಂಬುದಕ್ಕೆ ಅರಳಿಕಟ್ಟಿ ಫೌಂಡೇಷನ್ ಸ್ಥಾಪಿಸಿ ಸಾಮಾಜಿಕ, ಆರ್ಥಿಕ, ಆರೋಗ್ಯ, ಶಿಕ್ಷಣ ಕ್ಷೇತ್ರ ಶ್ರೀಮಂತಗೊಳಿಸಿದ ಕೀರ್ತಿ ಅರಳಿಕಟ್ಟಿಯವರಿಗೆ ಸಲ್ಲುತ್ತದೆ ಎಂದರು.

ಎಂಆರ್‌ಎನ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ ಮಾತನಾಡಿ, ಯಶಸ್ಸಿಗೆ ಮತ್ತೊಂದು ಹೆಸರೇ ತಿಮ್ಮಣ್ಣ ಅರಳಕಟ್ಟಿ ಎಂದರೆ ಅತಿಶಯೋಕ್ತಿಯೆನಿಸದು ಎಂದರು.

ಶಿಕ್ಷಣ ತಜ್ಞ ಡಾ.ಬಸವರಾಜ ಕೊಣ್ಣೂರ ಮಾತನಾಡಿ, ಶಿಕ್ಷಣ ಸಂಸ್ಥೆ ಹುಟ್ಟುಹಾಕಿ ಕೇವಲ ನಾಲ್ಕು ವರ್ಷದಲ್ಲಿ ರಾಯಲ್ ಸ್ಕೂಲ್ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸಾಧನೆಗೈದಿದ್ದಾರೆ ಎಂದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಟಿ.ವಿ ಅರಳಿಕಟ್ಟಿ ಮಾತನಾಡಿದರು. ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಸವಿತಾ ಅರಳಿಕಟ್ಟಿ, ಉಪಾಧ್ಯಕ್ಷೆ ರಾಜೇಶ್ವರಿ ಕೋಮಾರ, ಕಾರ್ಯದರ್ಶಿ - ವಿನಾಯಕ ಅರಳಿಕಟ್ಟಿ, ಆಡಳಿತಾಧಿಕಾರಿ ಇಂದಿರಾ ಸಾತನೂರ, ಪ್ರಾಚಾರ್ಯ ಚಂದ್ರಶೇಖರ ನಾಗವಂದ, ಆರ್.ಎಂ. ಕೋಮಾರ, ದಿನೇಶ ಕಕರಡ್ಡಿ, ಪಾಂಡು ಮುಳ್ಳೂರ ಇದ್ದರು. ವಿವಿಧ ವಿಭಾಗದಲ್ಲಿ ಸಾಧನೆಗೈದ ಮಕ್ಕಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net