ಸರ್ಕಾರಿ ಕಾಲೇಜಿಗೆ ಸಕಲ ಸೌಲಭ್ಯ ಒದಗಿಸುವೆ : ಶಾಸಕ ರಮೇಶ ಭೂಸನೂರ ಭರವಸೆ

Sindagi
ಸಿಂದಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್.ಎಸ್.ಎಸ್. ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಶಾಸಕ ರಮೇಶ ಭೂಸನೂರ ಉದ್ಘಾಟಿಸಿದರು. ಪ್ರಾಚಾರ್ಯ ಸತೀಶಕುಮಾರ ಗಾಯಕವಾಡ, ಪ್ರಾಧ್ಯಾಪಕ ಕಷ್ಣಾ ರೆಡ್ಡಿ ಇತರರಿದ್ದರು.
Published on

ಸಿಂದಗಿ: ವಿಜಯಪುರ ಜಿಲ್ಲೆಯಲ್ಲಿ ಶಿಕ್ಷಣದ ಬೆಳಕು ಚೆಲ್ಲಿದವರು ಬಂಥನಾಳದ ಶ್ರೀಗಳು. ಆ ಬೆಳಕು ಕ್ರಾಂತಿ ದೀಪವಾಗಿ ಜಿಲ್ಲೆಯಾದ್ಯಂತ ಹರಡಿ ವಿದ್ಯಾರ್ಥಿಗಳ ಭವಿಷ್ಯ ಬೆಳಗುತ್ತಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಪ್ರಸಕ್ತ ಸಾಲಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್.ಎಸ್.ಎಸ್. ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜಿನ ಕಂಪೌಂಡ್, ಕೊಠಡಿಗಳ ಸೌಲಭ್ಯ, ನೀರಿನ ಸವಲತ್ತು ಒದಗಿಸಲು ವಾರದೊಳಗೆ ಶಾಲಾ ಸಮಿತಿ, ಕಾವಲು ಸಮಿತಿ ರಚಿಸುವುದರ ಜತೆಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿ, ವಿದ್ಯಾರ್ಥಿಗಳು ಸರ್ಕಾರಿ ಶಾಲೆ, ಕಾಲೇಜುಗಳ ಲಾಭ ಪಡೆದು ಮಾನವೀಯತೆಯಿಂದ ಬದುಕು ರೂಪಿಸಿಕೊಳ್ಳಬೇಕು ಎಂದರು.

ಸ್ಕಿಲ್ ಡೆವೆಲಪ್‌ಮೆಂಟ್ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಸಾಧನೆ ತೋರಿದ ರವಿಕುಮಾರ ದೊಡಮನಿ ಹಾಗೂ ನಿಂಗಣ್ಣ ಸೈದಾಪುರ ಅವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು.

ಪ್ರಾಧ್ಯಾಪಕ ಕಷ್ಣಾ ರೆಡ್ಡಿ ಪ್ರಾಸ್ತಾವಿಕ ಮಾತನಾಡಿ ಎನ್.ಇ.ಪಿ ಅಡಿ 10 ಹೊಸ ವಿಷಯಗಳ ಕೂಡಿಕೆಯ ಶಿಕ್ಷಣದ ಜತೆಗೆ ಮುಂದಿನ ವರ್ಷದಲ್ಲಿ ಬಿಎಸ್ಸಿ ಪದವಿ ಶಿಕ್ಷಣ ನೀಡಲಾಗುತ್ತಿದೆ ಎಂದರು. ಪ್ರಾಚಾರ್ಯ ಸತೀಶಕುಮಾರ ಗಾಯಕವಾಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಧ್ಯಾಪಕಿ ಆಯಿಶಾ ಸಿದ್ಧಿಕಾ ವಾರ್ಷಿಕ ವರದಿ ವಾಚಿಸಿದರು. ಕಾಲೇಜಿನ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಹಾಗೂ ಪದಕಗಳನ್ನು ವಿತರಿಸಲಾಯಿತು.

ಪಿಎಸ್‌ಐ ನಿಂಗಪ್ಪ ಪೂಜಾರಿ, ಈರಣ್ಣ ರಾವೂರ, ಯಮನಪ್ಪ ಕೆಳಗೇರಿ, ಮೀರಜ್ ಪಾಶಾ, ಕಾಲೇಜಿನ ಪ್ರಾಧ್ಯಾಪಕರು ಹಾಗೂ ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net