

ಅರಕಲಗೂಡು: ಭಾರತೀಯ ಸಂಸ್ಕೃತಿಯಲ್ಲಿ ವಿದ್ಯೆ ಕಲಿಸುವ ಗುರುವಿಗೆ ವಿಶೇಷ ಸ್ಥಾನವಿದ್ದು, ಇದನ್ನು ಮನಗಂಡು ಶಿಕ್ಷಕ ವರ್ಗ ಮಕ್ಕಳಿಗೆ ಶಿಕ್ಷಣದ ಜತೆಗೆ ಮೌಲ್ಯಗಳನ್ನು ತಿಳಿಸಬೇಕು ಎಂದು ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ರಾಮನಾಥಪುರದ ಜೆ.ಎಸ್.ಪಿ. ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಗುರುವಿನ ಮಾರ್ಗದರ್ಶನದಲ್ಲಿ ಕಲಿತಾಗ ಮಾತ್ರ ವಿದ್ಯೆಯನ್ನು ಕರಗತ ಮಾಡಿಕೊಳ್ಳಲು ಸಾಧ್ಯ ಎಂದರು.
ಗ್ರಾಮದ ಮುಖಂಡ ದೇವಕಿ ಚಂದ್ರಶೇಖರ್ ಮಾತನಾಡಿದರು. ಶ್ರೀ ಮಠದ ಸಮಿತಿ ಕಾರ್ಯದರ್ಶಿ ದಿವಾಕರಸ್ವಾಮಿ, ಅಧ್ಯಕ್ಷ ಲೋಕೇಶ್, ಇ.ಸಿ.ಒ.ಪೊನ್ನಪ್ಪ, ಗ್ರಾಪಂ ಸದಸ್ಯೆ ಸರಸ್ವತಿ, ಶಿಕ್ಷಕರ ಸಂಘದ ಸದಸ್ಯರಾದ ಮಂಜೇಗೌಡ, ಶಶಿಕುಮಾರ್, ಕೃಷ್ಣೇಗೌಡ, ಮುಖ್ಯ ಶಿಕ್ಷಕ ರವಿ, ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕುಮಾರಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.