ಸಾರ್ವಜನಿಕರಿಗೆ ಸಕಾಲದಲ್ಲಿ ಸರ್ಕಾರಿ ಸೌಲಭ್ಯ ನೀಡಿ

LOKAYUKTA
Published on

ಶಿರಹಟ್ಟಿ: ಸರ್ಕಾರಿ ಸೌಲಭ್ಯಗಳನ್ನು ಸಕಾಲದಲ್ಲಿ ಜನರಿಗೆ ಒದಗಿಸುವಂತೆ ಲೋಕಾಯುಕ್ತ ಎಸ್‌ಪಿ ಶಿದ್ಲಿಂಗಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಲೋಕಾಯುಕ್ತರ ಜನಸಂಪರ್ಕ ಸಭೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾರ್ವಜನಿಕರ ಸಮಸ್ಯೆಗಳು ಕ್ರಮಬದ್ಧವಾಗಿ ಹಾಗೂ ಕಾನೂನು ಪ್ರಕಾರವಾಗಿದ್ದರೆ ಅವರನ್ನು ವೃಥಾ ಅಲೆದಾಡಿಸದೇ ಅವರ ಕೆಲಸ ಮಾಡಿಕೊಡಿ. ನಾಳೆ, ನಾಡಿದ್ದು ಎಂದು ಅನಗತ್ಯ ವಿಳಂಬ ಮಾಡಿದರೆ ಅದು ಆಮೀಷಕ್ಕಾಗಿ ಎನ್ನುವುದು ಸ್ಪಷ್ಟವಾಗುತ್ತದೆ ಎಂದರು.

ಪಟ್ಟಣದ ಬಸವೇಶ್ವರ ವೃತ್ತದ ಬಳಿಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 30 ಮಳಿಗೆಗಳಿಗೆ 20 ವರ್ಷಗಳಿಂದ ಟೆಂಡರ್ ಕರೆಯದಿರುವುದರ ಬಗ್ಗೆ ಮಂಜುನಾಥ ಹುಬ್ಬಳ್ಳಿ ದೂರು ನೀಡಿದರು. ಲಕ್ಷ್ಮೇಶ್ವರ ರಸ್ತೆ ಬಳಿ 5 ವರ್ಷಗಳ ಹಿಂದೆ ನಿರ್ಮಿಸಲಾದ 10 ಹೊಸ ಮಳಿಗೆಗಳಿಗೂ ಇಂದಿಗೂ ಟೆಂಡರ್ ಕರೆದಿಲ್ಲ ಎಂದು ಅಧಿಕಾರಿಗಳ ಗಮನಕ್ಕೆ ತಂದರು.

2003 ರಲ್ಲೇ ಹಣ ಪಾವತಿಸಿ ಆರ್‌ಆರ್ ಪಡೆದಿದ್ದರೂ ಕಂಬಗಳನ್ನು ಅಳವಡಿಸದಿರುವ ಬಗ್ಗೆ ರೈತ ಗುರುಪಾದಪ್ಪ ಹೂಗಾರ ದೂರು ನೀಡಿದರು. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಶಿದ್ಲಿಂಗಪ್ಪ ಅವರು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಪಪಂ ವಿರುದ್ಧ 4, ಹೆಸ್ಕಾಂ ವಿರುದ್ಧ 1, ಪೊಲೀಸ್ ಇಲಾಖೆ ವಿರುದ್ಧ 1 ಮತ್ತು ತಹಸೀಲ್ದಾರ್ ಕಚೇರಿ ವಿರುದ್ಧ 1 ದೂರು ದಾಖಲಾಯಿತು. ಲೋಕಾಯುಕ್ತ ಡಿವೈಎಸ್‌ಪಿ ವಿಜಯಕುಮಾರ ಬಿರಾದಾರ, ಇನ್‌ಸ್ಪೆಕ್ಟರ್ ಎಸ್.ಎಸ್. ತೇಲಿ, ತಾಲೂಕು ದಂಡಾಧಿಕಾರಿ ಕೆ. ರಾಘವೇಂದ್ರರಾವ್, ತಾಪಂ ಇಒ ರಾಮಣ್ಣ ದೊಡ್ಡಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net