ಎಸ್ಸಿ, ಎಸ್ಟಿ ಕುಟುಂಬಗಳಿಗೆ ಭಾಗ್ಯಜ್ಯೋತಿ ಕಲ್ಪಿಸಿ ; ಸಚಿವ ಜೆ.ಸಿ.ಮಾಧುಸ್ವಾಮಿ ಸಲಹೆ

22 c n halli MEETING 1
Published on

ಚಿಕ್ಕನಾಯಕನಹಳ್ಳಿ: ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಬಡವರನ್ನು ಗುರುತಿಸಿ ಭಾಗ್ಯಜ್ಯೋತಿ ಸಂಪರ್ಕ ಕಲ್ಪಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋವವಾರ ಹಮ್ಮಿಕೊಂಡಿದ್ದ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮೀಸಲಿಟ್ಟಿರುವ ಅನುದಾನವನ್ನು ಎಸ್ಸಿ, ಎಸ್ಟಿ ಸಮುದಾಯಗಳಿಗೆ ಬಳಸಬೇಕು, ಗ್ರಾಮಗಳಲ್ಲಿ ನಿವೇಶನ ರಹಿತರಿಗೆ ಮನೆ ಮಂಜೂರು ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪಂಚಾಯಿತಿಗಳಲ್ಲಿ ಎಸ್‌ಸಿ, ಎಸ್‌ಟಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅನುದಾನ ನೀಡಬೇಕು. ಆದರೆ ಯಾವ ಪಂಚಾಯಿತಿಯಲ್ಲೂ ಅನುದಾನ ನೀಡುತ್ತಿಲ್ಲ ಎಂದು ಮಾದಿಗದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಬೇವಿನ ಹಳ್ಳಿ ಚನ್ನಬಸವಯ್ಯ ಆರೋಪಿಸಿದರು.

ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಚಿಕ್ಕರಾಂಪುರ ಮಾತನಾಡಿ, ಅನುಭವದಲ್ಲಿರುವ ಎಸ್ಸಿ, ಎಸ್ಟಿ ಸಮುದಾಯಕ್ಕೆ ಭೂಮಿ ಮಂಜೂರು ಮಾಡಬೇಕು, ಕಾಲನಿಗಳಲ್ಲಿ ಕುಡಿಯುವ ನೀರು ಒದಗಿಸಬೇಕು, ಸಮುದಾಯದ ನಿವೇಶನ, ಆಸ್ತಿಗಳಿಗಳಿಗೆ ಸಂಬಂಧಿಸಿದಂತೆ ದಾಖಲೆ ಸಿದ್ಧಪಡಿಸಿ ನೀಡಬೇಕು, ತಾಲೂಕಿನ ಭೂರಹಿತ ಭೂಮಿ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಅನುದಾನ ದುರ್ಬಳಕೆಯಾಗುತ್ತಿವೆ. ಅಲ್ಲಿನ ಅಧ್ಯಕ್ಷರು, ಸದಸ್ಯರು, ಅಧಿಕಾರ ಬಳಸಿಕೊಂಡು ಅನುದಾನವನ್ನು ಬೇರೆಯವರ ಅಭಿವೃದ್ಧಿಗೆ ಬಳಸುತ್ತಿದ್ದು, ಇದರಿಂದ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು, ಸರಿಪಡಿಸಬೇಕು ಎಂದು ಎಸ್ಸಿ, ಎಸ್ಟಿ ಮುಖಂಡರು ಸಚಿವರ ಗಮನಕ್ಕೆ ತಂದರು.

ಬ್ಯಾಂಕ್‌ಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಸರ್ಕಾರದಿಂದ ಸಿಗುವ ಸಾಲಸೌಲಭ್ಯಕ್ಕಾಗಿ ಬ್ಯಾಂಕ್‌ಗೆ ಹೋದಾಗ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಕಳೆದ ಸಭೆಯಲ್ಲಿ ಚರ್ಚೆಸಿದ್ದರೂ ಕ್ರಮಕೈಗೊಂಡಿಲ್ಲ. ತೋಟಗಾರಿಕೆ ಇಲಾಖೆಯಲ್ಲಿ ಎಸ್ಸಿ, ಎಸ್ಟಿಗೆ ಸವಲತ್ತುಗಳು ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net