

ಮಡಿಕೇರಿ:
ಸರ್ಕಾರದ ಯೋಜನೆಗಳಿಗಾಗಿ ಭೂಮಿ ಕಳೆದುಕೊಳ್ಳುವವರಿಗೆ ವಿಶೇಷ ಪ್ಯಾಕೇಜ್ ಕಲ್ಪಿಸುವ ವ್ಯವಸ್ಥೆ ಸರ್ಕಾರ ಮಾಡಬೇಕು ಎಂದು ಮಾಜಿ ಶಾಸಕ ಕೈಲಾಶ್‌ನಾಥ್ ವೀರೇಂದ್ರ ಪಾಟೀಲ್ ಹೇಳಿದರು. ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದಿಂದ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಬುಧವಾರ ಹಾರಂಗಿಯಲ್ಲಿ ಆಯೋಜಿಸಲಾಗಿದ್ದ ಕೃಷಿ ಅಭಿವೃದ್ಧಿಗಾಗಿ ಹಾರಂಗಿ ಜಲಾಶಯದ ನಿರ್ಮಾಣಕ್ಕೆ ಕಾರಣಕರ್ತೃ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಜನ್ಮಶತಮಾನೋತ್ಸವ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಮತ್ತೊಬ್ಬರ ಅಭಿವೃದ್ಧಿಗಾಗಿ ತಮ್ಮದೆಲ್ಲವನ್ನೂ ಕಳೆದುಕೊಳ್ಳುವವರ ತ್ಯಾಗ ಮಹತ್ವದ್ದು. ಇಂಥ ಬೆಲೆ ಕಟ್ಟಲಾಗದ ತ್ಯಾಗ ಮಾಡುವವರಿಗೆ ಸುಂದರ ಬದುಕು ಕಟ್ಟಿಕೊಡುವ ಕೆಲಸ ಸರ್ಕಾರ ಮಾಡಬೇಕು. ಇಂಥವರಿಗಾಗಿ ದೀರ್ಘಾವಧಿಯ ಯೋಜನೆ ರೂಪಿಸಬೇಕು. ಈ ಸಂಬಂಧ ಸರ್ಕಾರದ ಮೇಲೆ ರಾಜಕೀಯ ಒತ್ತಡ ಹಾಕುವಂತಾಗಬೇಕು.
ತಂದೆ ವೀರೇಂದ್ರ ಪಾಟೀಲ್ ಅವರು ಜನತೆಗೆ ಸಲ್ಲಿಸಿದ ಸೇವೆಗಾಗಿ ಇಂಥದ್ದೊಂದು ಗೌರವ ಸಿಕ್ಕಿದೆ. ವೀರೇಂದ್ರ ಪಾಟೀಲ್ ಜೀವಿತಾವಧಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಸಾಕಷ್ಟು ಹೋರಾಟ ನಡೆಸಿದ್ದರು. ಹೇಮಾವತಿ, ಅಲಮಟ್ಟಿ, ನಾರಾಯಣಪುರ ಅಣೆಕಟ್ಟೆ ನಿರ್ಮಾಣದ ಹಿಂದೆಯೂ ಶ್ರಮ ಹಾಕಿದ್ದರು. ರೈತರಿಗೆ ನೀರು ಕೊಡುವ ತನಕ ಅವರು ಅಭಿವೃದ್ದಿ ಆಗುವುದಿಲ್ಲ ಎಂದು ಪಾಟೀಲರು ನಂಬಿದ್ದರು. ಹಾಗಾಗಿಯೇ ಸಣ್ಣ ಮತ್ತು ಮಧ್ಯಮ ನೀರಾವರಿಗೂ ಅವಕಾಶ ಮಾಡಿಕೊಟ್ಟರು. ಸಾಧ್ಯ ಇರುವ ಎಲ್ಲಾ ಕಡೆಗಳಲ್ಲಿ ಕೆರೆ ತೋಡಿಸಿದ್ದಾರೆ. ನೀರಿನ ಅವಕಾಶ ಸಿಕ್ಕ ನಂತರ ರೈತರು ಆರ್ಥಿಕವಾಗಿ ಬೆಳೆಯಬಹುದು. ಈ ಮೂಲಕ ರಾಜ್ಯವೂ ಅಭಿವೃದ್ಧಿ ಆಗುತ್ತದೆ ಎಂದು ಹೇಳಿದರು.
ವೀರೇಂದ್ರ ಪಾಟೀಲ್ ಜನ್ಮ ಶತಮಾನೋತ್ಸವ ಲಾಂಛನ ಬಿಡುಗಡೆ ಮಾಡಿದ ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಕೆಲಸ ಮಾಡುವವರು ಒಬ್ಬರು, ಉದ್ಘಾಟನೆ ಮಾಡುವವರು ಮತ್ತೊಬ್ಬರು. ಹಾರಂಗಿ ಅಣೆಕಟ್ಟೆ ವಿಷಯದಲ್ಲೂ ಹೀಗೆಯೇ ಆಯಿತು. ಎಲ್ಲದಕ್ಕೂ ಋಣಾನುಬಂಧ ಬೇಕು. ಮಾದಾಪುರ, ಹಟ್ಟಿಹೊಳೆಯಲ್ಲಿ ಯಾವಾಗಲೂ ನೀರು ಹರಿಯುತ್ತಿರುತ್ತದೆ. ಹಾಗಾಗಿ ಕಾವೇರಿಗಿಂತ ಹೆಚ್ಚು ನೀರು ಹಾರಂಗಿಯಲ್ಲಿ ಇರುತ್ತದೆ. ಸಮುದ್ರಕ್ಕೆ ಹೋಗುವ ನೀರು ತಡೆದು ಲಕ್ಷಾಂತರ ಎಕರೆ ಜಮೀನು ಹಸಿರು ಮಾಡಲಾಗಿದೆ. ಕೊಡಗಿನಿಂದ ವರ್ಷಕ್ಕೆ ೪೫೦ ಟಿಎಂಸಿ ನೀರು ಹರಿಸಲಾಗುತ್ತಿದೆ. ಹಾರಂಗಿಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರ ಭೂಮಿ ಕೊಟ್ಟರೂ ದಾಖಲೆ ಕೊಟ್ಟಿರಲಿಲ್ಲ. ನಾವು ಶಾಸಕರಾಗಿದ್ದಾಗ ದಾಖಲೆ ಕೊಡಿಸಲಾಯಿತು. ಮೂಲಭೂತ ಸೌಕರ್ಯ ಕಲ್ಪಿಸಿದರೆ ಊರು ಅಭಿವೃದ್ಧಿ ಆಗುತ್ತದೆ. ಜನರನ್ನು ಸೋಮಾರಿಗಳನ್ನಾಗಿ ಮಾಡುವ ಯೋಜನೆಗಳ ಬದಲು ಮಾನವ ಶಕ್ತಿಯ ಸದುಪಯೋಗಪಡಿಸಿಕೊಳ್ಳುವ ಯೋಜನೆಗಳ ಅಗತ್ಯ ಇಂದಿನದ್ದಾಗಿದೆ ಎಂದು ಹೇಳಿದರು.
ಪಿರಿಯಾಪಟ್ಟಣ ಮಾಜಿ ಶಾಸಕ ಹೆಚ್.ಸಿ. ಬಸವರಾಜು ಮಾತನಾಡಿ ಸೇವೆ ಮಾಡಿದ ಜನರ ಸ್ಮರಣೆ ಮಾಡಿಕೊಳ್ಳುವ ಮನೋಭಾವ ಈಗ ವಿರಳ ಆಗಿದೆ. ಈ ಸಂಸ್ಕೃತಿ ಯುವ ಜನಾಂಗದಲ್ಲಿ ಬೆಳೆಯಬೇಕು. ಪ್ರತಿಯೊಬ್ಬರೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಪೂರ್ವಿಕರು ಮಾಡಿದ ತ್ಯಾಗ ಗೌರವಿಸಬೇಕು. ಬದುಕಿಗಾಗಿ ನೀರು ಕೊಟ್ಟಿದ್ದಕ್ಕಾಗಿ ಹಳೆ ಮೈಸೂರು ಭಾಗದವರು ಕೊಡಗಿನವರಿಗೆ ಅಭಾರಿಗಳಾಗಿದ್ದಾರೆ ಎಂದರು.
ಕನ್ನಡಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ ಜಲಾಶಯ ನಿರ್ಮಾಣ ಹಿಂದೆ ಹಲವರು ಶ್ರಮಪಟ್ಟಿದ್ದಾರೆ. ಅಂಥವರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುವ ಅಗತ್ಯ ಇದೆ. ಹಾಗಾಗಿ ವೀರೇಂದ್ರ ಪಾಟೀಲ್ ಜನ್ಮ ಶತಮಾನೋತ್ಸವ ಆಚರಣೆ ನಿರ್ಧಾರ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ವರ್ಷಪೂರ್ತಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜಲಾಶಯ ಆವರಣದಲ್ಲಿ ವೀರೇಂದ್ರ ಪಾಟೀಲ್ ಪುತ್ಥಳಿ ನಿರ್ಮಿಸಬೇಕು. ಹಾರಂಗಿ ವೃತ್ತಕ್ಕೆ ವೀರೇಂದ್ರ ಪಾಟೀಲ್ ಅವರ ಹೆಸರು ಇಡಲು ಗ್ರಾ.ಪಂ. ಮುಂದಾಗಬೇಕು. ಇಲ್ಲದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾದೀತು ಎಂದು ಎಚ್ಚರಿಸಿದರು.
ಹಾರಂಗಿ ನೀರು ಬಳಕೆದಾರರ ಮಹಾಮಂಡಲ ಅಧ್ಯಕ್ಷ ಚೌಡೇಗೌಡ, ಕೂಡು ಮಂಗಳೂರು ಗ್ರಾ.ಪಂ. ಅಧ್ಯಕ್ಷ ಭಾಸ್ಕರ ನಾಯಕ್ ಮಾತನಾಡಿದರು. ಗ್ರಾ.ಪಂ. ಸದಸ್ಯ ಮಣಿಕಂಠ, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಮಾಜಿ ಸದಸ್ಯ ವಿ.ಪಿ. ಶಶಿಧರ್, ಹಾರಂಗಿ ವಿಭಾಗದ ಕಾರ್ಯಪಾಲಕ ಅಭಿಯಂತರ ದೇವೇಗೌಡ, ಹಾರಂಗಿ ಜಲಾಶಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ತೊರೆನೂರು ನೀರು ಬಳಕೆದಾರರ ಸಂಘದ ಅಧ್ಯಕ್ಷ ಕೆ.ಕೆ. ಪಾಂಡುರಂಗ, ಉಪನ್ಯಾಸಕ ಹಂಡ್ರಂಗಿ ನಾಗರಾಜ್ ಇದ್ದರು.