

ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮದ ಪರಿಶಿಷ್ಟ ಜಾತಿ ಬಡಾವಣೆ ನಿವಾಸಿಗಳಿಗೆ ಗ್ರಾಮದಲ್ಲಿ ಸ್ಮಶಾನ ಇಲ್ಲದ ಕಾರಣ ಅಂತ್ಯಸಂಸ್ಕಾರಕ್ಕೆ ತೊಂದರೆಯಾಗುತ್ತಿದ್ದು, ಸಂಬಂಧಪಟ್ಟವರು ಕೂಡಲೇ ಸೂಕ್ತ ಕ್ರಮ ವಹಿಸಿ ಸ್ಮಶಾನಕ್ಕೆ ಜಾಗವನ್ನು ನೀಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಸೋಮವಾರ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ಈ ಬಗ್ಗೆ ಗ್ರಾಮದ ಮುಖಂಡ ಆರ್. ರಾಜೇಶ್ ಮಾತನಾಡಿ, ಕೆಸ್ತೂರು ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದವರು ಅಧಿಕ ಸಂಖ್ಯೆಯಲ್ಲಿದ್ದು, 1500 ಕ್ಕೂ ಅಧಿಕ ಕುಟುಂಬಗಳಿವೆ. ಸಾವಿರಾರು ಜನಸಂಖ್ಯೆ ಹೊಂದಿರುವ ಈ ದೊಡ್ಡ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವಿಲ್ಲ. ಇಲ್ಲಿ ಯಾರಾದರು ಮೃತಪಟ್ಟರೆ ಹೆಣ ಹೂಳುವುದಕ್ಕೂ ಪರದಾಡುವ ಸ್ಥಿತಿ ಇದೆ. ಜಮೀನು ಇರುವವರು ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆಯನ್ನು ಮಾಡಿಕೊಂಡರೆ ಜಮೀನು ಇಲ್ಲದವರು ಮೃತಪಟ್ಟರೆ ಅಂತ್ಯಕ್ರಿಯೆ ಮಾಡಲು ಪರದಾಡುವ ಸ್ಥಿತಿ ಇದೆ. ಹಾಗಾಗಿ ದಲಿತ ಸಮುದಾಯದ ಜನಾಂಗದ ಸ್ಮಶಾನಕ್ಕೆ ಜಾಗವನ್ನು ತಕ್ಷಣ ನೀಡಬೇಕೆಂದು ಆಗ್ರಹಿಸಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಜಯಪ್ರಕಾಶ್, ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಮಾಹಿತಿ ಪಡೆದು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಸ್ಥಳೀಯರಾದ ಶಾರದಮ್ಮ, ಮೀನಾ, ಜಯನಿಂಗಮ್ಮ, ಭ್ಯಾಗ, ಪುಟ್ಟಮ್ಮ, ನಾಗಮ್ಮ, ಮಹದೇವಮ್ಮ, ಮಹದೇವಸ್ವಾಮಿ, ಶಿವಮ್ಮ ಇತರರು ಹಾಜರಿದ್ದರು.