ಬಳ್ಳಾರಿ : ಇಲ್ಲಿನ ಬುಡಾ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ಬಳಿಕ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರ ತಕ್ಷಣವೇ ಜನರ ನೆರವಿಗೆ ಬರಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ವಿಧಾನಪರಿಷತ್ತಿನಲ್ಲಿ ವೈ.ಎಂ.ಸತೀಶ್ ಮಾತನಾಡಿ, ಬುಡಾ ಸಭೆಗಳು ನಿಯಮಿತವಾಗಿ ನಡೆಯುತ್ತಿಲ್ಲ. ಅಲ್ಲದೇ, ಪ್ರಾಧಿಕಾರದ ಅಧ್ಯಕ್ಷರ ವಿರುದ್ಧ ಕರ್ತವ್ಯಲೋಪ ಹಾಗೂ ಭ್ರಷ್ಟಾಚಾರ ಆರೋಪಿಸಿ ಇಬ್ಬರು ಶಾಸಕರು ಸರ್ಕಾರಕ್ಕೆ ಪತ್ರ ಬರೆದು, ತನಿಖೆ ನಡೆಸಲು ಒತ್ತಾಯಿಸಿದ್ದರು. ಬಳಿಕ ಬುಡಾ ಹಾಲಿ ಅಧ್ಯಕ್ಷ ಜೆ.ಎಸ್.ಆಂಜನೇಯಲು ವಿರುದ್ಧ ಆರೋಪಗಳ ಕುರಿತು ತನಿಖೆಯೂ ನಡೆಯಿತು. 2024ರ ಜುಲೈ 08 ರಂದು ಕೊನೆಯ ಸಭೆ ನಡೆದಿದೆ. ಆ ನಂತರ ಸಭೆಯು ನಡೆಯದ ಕಾರಣ ಹೊಸ ಲೇಔಟ್‌ಗಳ ಪರವಾನಿಗೆ, ಸೈಟುಗಳ ಮಾರಾಟ - ಖರೀದಿ ಅಥವಾ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ.
ಬುಡಾವು ಶ್ರೀಕನಕ ದುರ್ಗಮ್ಮ ಗುಡಿಯ ಸಮೀಪದ ರೈಲ್ವೆ ಅಂಡರ್ ಬ್ರಿಡ್ಜ್ ವಿಸ್ತರಿಸಲು ಐದು ವರ್ಷಗಳಿಂದ ಇದೆ. ಈ ಕಾಮಗಾರಿಗಾಗಿ 8.84 ಕೋಟಿ ರೂ. 2022 ನವೆಂಬರ್‌ನಲ್ಲಿ ರೈಲ್ವೆಗೆ ಪಾವತಿಸಲಾಗಿದೆ. ಬುಡಾ ಈವರೆಗೂ ರಸ್ತೆ ವಿಸ್ತರಣೆಗೆ ಭೂಮಿಯನ್ನು ಗುರುತಿಸಿ, ನೀಡುವಲ್ಲಿ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ, ಏಕೆ ಎಂದು ಪ್ರಶ್ನಿಸಿದರು.
ಪ್ರಾಧಿಕಾರದ ಅಧ್ಯಕ್ಷರೇ ಪ್ರತೀ ತಿಂಗಳು ಸಭೆಯನ್ನು ಆಯೋಜಿಸಬೇಕಿದೆ. ಲೋಕಾಯುಕ್ತರು ದಾಳಿ ನಡೆಸಿದಾಗ ಆರು ಅಧಿಕಾರಿಗಳು ಸಿಕ್ಕಿಕೊಂಡು, ಬಂಧನಕ್ಕೊಳಗಾಗಿರುವ ಕಾರಣ ನಾನೇ, ವೈಯಕ್ತಿಕವಾಗಿ ಗಮನ ಹರಿಸಿ ಬುಡಾ ಮತ್ತು ಮುಡಾ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ನಿರ್ಧಾರಗಳನ್ನು ಕೈಗೊಳ್ಳುತ್ತಿರುವೆ. ವಿಧಾನಸಭೆಯ ಅಧಿವೇಶನ ಪೂರ್ಣಗೊಂಡ ನಂತರ ಬುಡಾ ಸಮಸ್ಯೆಗೆ ಪರಿಹಾರ ಕೈಗೊಳ್ಳಲು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತೇನೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್. ಸುರೇಶ್ ಎಂದು ಉತ್ತರಿಸಿದರು.
====