

ಲಿಂಗದಹಳ್ಳಿ: ಉಡೇವಾ ಗ್ರಾಮದಲ್ಲಿ ನೂರಾರು ದಲಿತ ಕುಟುಂಬಗಳು ವಾಸಿಸುತ್ತಿದ್ದು ಈ ಕುಟುಂಬಗಳು ಸೇರಿದಂತೆ ವಿವಿಧ ಸಮುದಾಯದ ಜನರ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯಿಂದ ಅಗತ್ಯ ನಿವೇಶನ ನೀಡಬೇಕು ಎಂದು ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಎಸ್.ಕೆ.ಸ್ವಾಮಿ ಮನವಿ ಮಾಡಿದರು.
ಗ್ರಾಮದ ಶ್ರೀಕರಿಯಮ್ಮ ದೇವಿ ದೇವಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಲು 12ವರ್ಷಗಳ ಹಿಂದೆ ಉಡೇವಾ ಗ್ರಾಮದ ಸರ್ವೇ ನಂಬರ್ 55 ರಲ್ಲಿ 20* 60 ಅಡಿ ಅಗಲದ ಖಾಲಿ ನಿವೇಶವನ್ನು ಗ್ರಾಪಂನಿಂದ ನೀಡಿದ್ದು, ಈ ನಿವೇಶನದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸ್ಥಳಾವಕಾಶ ಕಡಿಮೆ ಇರುವುದರಿಂದ ಹಾಲಿ ನೀಡಲಾಗಿರುವ ನಿವೇಶನಕ್ಕೆ ಹೊಂದಿಕೊಂಡಂತೆ ಹೆಚ್ಚುವರಿ ನಿವೇಶನ ನೀಡುವಂತೆ ಗ್ರಾಪಂಗೆ ಒತ್ತಾಯಿಸಿದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್. ಮಂಜುನಾಥ್ ಮಾತನಾಡಿ, ಗ್ರಾಪಂ ಹಾಗೂ ಇತರ ಮೂಲಗಳಿಂದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸೂಕ್ತ ಅಳತೆಯ ನಿವೇಶನ ನೀಡಿದರೆ ತಮ್ಮ ಇಲಾಖೆಯಿಂದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.
ಉಡೇವಾ ಗ್ರಾಮದ ಛಲವಾದಿ ಮಹಾಸಭಾದ ಗ್ರಾಮಧ್ಯಕ್ಷ ಯು.ಎಲ್ ಗುರು ಮಾತನಾಡಿ, ಉಡೇವಾ ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನ ಕಟ್ಟಡದ ನಿರ್ಮಾಣಕ್ಕೆ ಸರ್ಕಾರದಿಂದ ಬಿಡುಗಡೆಯಾಗಿದ್ದ 12 ಲಕ್ಷ ಅನುದಾನ ನಿವೇಶನ ಕೊರತೆಯಿಂದ ವಾಪಸ್ಸಾಗಿದ್ದು, ಗ್ರಾಪಂ ಮತ್ತು ಸಂಬಂಧ ಪಟ್ಟ ಇಲಾಖೆ ಸೂಕ್ತ ನಿವೇಶನ ಒದಗಿಸುವಂತೆ ಮನವಿ ಮಾಡಿದರು.
ಛಲವಾದಿ ತಾಲೂಕು ಮಹಾಸಭಾ ಪದಾಧಿಕಾರಿಗಳಾದ ಬಸವರಾಜು, ನಾಗರಾಜು, ಜಯರಾಮಪ್ಪ, ಮುದ್ದಪ್ಪ, ಜಯರಾಮ್, ಗ್ರಾಪಂ ಸದಸ್ಯರಾದ ಜ್ಞಾನಮೂರ್ತಿ, ಮಾಜಿ ಸದಸ್ಯರಾದ ಬಿ.ಮಂಜಪ್ಪ, ತಾಪಂ ಮಾಜಿ ಸದಸ್ಯ ಎಸ್.ಎ ಕೃಷ್ಣಪ್ಪ, ಲಿಂಗದಹಳ್ಳಿ ಹೋಬಳಿ ಕಸಪಾ ಅಧ್ಯಕ್ಷ ಎಲ್.ತಮ್ಮಯ್ಯ ಭೈರಾಪುರ ಮಂಜು ಇದ್ದರು.