ಬೆಳೆ ಸಮೀಕ್ಷೆದಾರರಿಗೆ ಸೇವಾ ಭದ್ರತೆ ಒದಗಿಸಿ

tlk manavi
ತಾಳಿಕೋಟೆ ತಾಲೂಕಿನಲ್ಲಿ ಬೆಳೆ ಸಮೀಕ್ಷೆ ನಡೆಸುವವರಿಗೆ ಸೇವಾ ಭದ್ರತೆ ಒದಗಿಸಬೇಕೆಂದು ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಕೀರ್ತಿ ಚಾಲಕ ಅವರಿಗೆ ಮನವಿ ಸಲ್ಲಿಸಿದರು.
Published on

ತಾಳಿಕೋಟೆ: ಕರ್ನಾಟಕ ರಾಜ್ಯದ(ಪಿ.ಆರ್.) ಸಮೀಕ್ಷೆದಾರರಿಗೆ ಸೇವಾ ಭದ್ರತೆ ಹಾಗೂ ಜೀವ ವಿಮೆ ಒದಗಿಸುವ ಮತ್ತು ಕಾಯಂಗೊಳಿಸಬೇಕೆಂದು ಕರ್ನಾಟಕ ಬೆಳೆ ಸಮಿಕ್ಷೇದಾರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ತಾಲೂಕು ಪದಾಧಿಕಾರಿಗಳು ತಹಸೀಲ್ದಾರರಿಗೆ ಸೋಮವಾರ ಮನವಿ ಸಲ್ಲಿಸಿದರು.

ಕರ್ನಾಟಕದಲ್ಲಿ ಅಂದಾಜು 7 ರಿಂದ 8 ವರ್ಷಗಳಿಂದ ಬೆಳೆ ಸಮೀಕ್ಷೆದಾರರೆಂದು ನಾವು ಸೇವೆ ಸಲ್ಲಿಸುತ್ತಿದ್ದೇವೆ. ಸೇವೆ ವೇಳೆ ಹೊಲದಲ್ಲಿ ಹಾವು, ಚೇಳು ಕಚ್ಚುತ್ತವೆ. ಕಾಡು ಹಂದಿ, ತೋಳ ಹಾಗೂ ಹೆಜ್ಜೇನುಗಳೂ ದಾಳಿ ನಡೆಸುತ್ತವೆ. ಹಿಂದೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ, ಕೋಡ್ಲಾ ಎಂಬ ಗ್ರಾಮದಲ್ಲಿ ನಮ್ಮ ಇಬ್ಬರು ಬೆಳೆ ಸಮೀಕ್ಷೆದಾರರಿಗೆ ಹಾವು ಕಚ್ಚಿದ್ದು ಸಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಿದರೂ ಪರಿಹಾರ ನೀಡಿಲ್ಲ. ಸಮೀಕ್ಷೆ ವೇಳೆ ಕೆಲ ರೈತರು ನೀವು ಯಾರೆಂದು ಪ್ರಶ್ನಿಸುತ್ತಾರಲ್ಲದೆ ಬೈಯುತ್ತಾರೆ. ಇಷ್ಟೇಲ್ಲ ನೋವು ಅನುಭವಿಸಿ ಸೇವೆ ಸಲ್ಲಿಸಬೇಕಾಗುತ್ತದೆ. ನಮಗೆ ಸೇವಾ ಭದ್ರತೆ ಇಲ್ಲದಿರುವುದು ನಮ್ಮ ಕುಟುಂಬದವರಿಗೆ ಆತಂಕ ಹುಟ್ಟಿದೆ. ಆದ್ದರಿಂದ ದಿನಗೂಲಿ ಆಧಾರದ ಮೇಲೆ ನಿತ್ಯ ಕೆಲಸ ನೀಡಬೇಕು. ಜೀವವಿಮೆ ಒದಗಿಸಬೇಕು ಮತ್ತು ಎಲ್ಲ(ಪಿ.ಆರ್) ಬೆಳೆ ಸಮೀಕ್ಷೇದಾರಿಗೆ ರೇನ್ ಕೋಟ್, ಶೂ ಒದಗಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಸಂಘದ ವತಿಯಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಕೂಡಲೇ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಕೀರ್ತಿ ಚಾಲಕ ಅವರಿಗೆ ಮನವಿ ಪತ್ರ ನೀಡಲಾಯಿತು.

ಸಂಘದ ತಾಲೂಕು ಅಧ್ಯಕ್ಷ ಆಸೀಫ್‌ಅಕ್ಬರಪಟೇಲ್ ಬಿರಾದಾರ, ಯಲ್ಲಣ್ಣ ನಡಕೋರ, ಸೋಮಶೇಖರ ಹಿರೇಮಠ, ಶ್ರೀಕಾಂತ ದೇಸಾಯಿ, ಸಿದ್ದು ತುಂಬಗಿ, ವೀರಯ್ಯ ಕೋರವಾರ, ದೇವೇಂದ್ರ ತಳವಾರ, ಮೈನುದ್ದೀನ್ ನದಾಫ್, ಚಂದ್ರಶೇಖರ ಲಿಂಗದಳ್ಳಿ, ಶಿವಕುಮಾರ ಉಕ್ಕಲಿ, ಬಸವರಾಜ ರಾಠೋಡ, ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ಸಂಘಟನೆ ತಾಲೂಕು ಅಧ್ಯಕ್ಷ ಬಿ.ಎಂ.ನಾಯ್ಕೋಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net