

ಕುಳಗೇರಿ ಕ್ರಾಸ್: ರಾಜ್ಯದ ಗಡಿ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಸೂಕ್ತ ಭದ್ರತೆ ಒದಗಿಸಬೇಕು ಹಾಗೂ ಗಡಿ ನೌಕರರ ಸುರಕ್ಷತೆಗೆ ಪ್ರತ್ಯೇಕ ಕಾಯ್ದೆ ಜಾರಿಗೊಳಿಸಬೇಕು ಎಂದು ಭೈರನಹಟ್ಟಿ-ಶಿರೋಳ ಮಠದ ಶಾಂತಲಿಂಗ ಶ್ರೀಗಳು ತಿಳಿಸಿದರು.
ಶ್ರೀದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಸಿಂದಗಿ ಶ್ರೀಶಾಂತವೀರ ಪಟ್ಟಾಧ್ಯಕ್ಷರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಶಾಂತಲಿಂಗ ಸ್ವಾಮಿಗಳ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಸಾರಿಗೆ ನಿರ್ವಾಹಕನ ಮೇಲೆ ಮರಾಠಿಗರು ದರ್ಪ ತೋರಿದ ಘಟನೆ ಮಾಸುವ ಮುನ್ನ ಬೆಳಗಾವಿ ತಾಲೂಕಿನ ಕಿಣೆ ತಿಪ್ಪಣ್ಣ ಡೋಕ್ರೆ ಎನ್ನುವ ವ್ಯಕ್ತಿ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಪತ್ತಾರ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿರುವುದು ಖಂಡನೀಯ ಎಂದರು.
ಕರ್ನಾಟಕದ ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ ಕರುನಾಡಿನಲ್ಲಿಯೇ ಕನ್ನಡತನವನ್ನು ಹುಡುಕುವಂತಹ ಸಂದಿಗ್ಧ ಪರಸ್ಥಿತಿ ಎದುರಾಗಿದೆ. ಭಾಷಾ ವಿರೋಧಿ ಪುಂಡಾಟಿಕೆ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದರು.
ಎಸ್.ಎಸ್. ಪೂಜಾರ ಮಾತನಾಡಿ, ಬಸವಣ್ಣನವರ ಸಮನ್ವಯ ದೃಷ್ಟಿ, ಅಲ್ಲಮ ಪ್ರಭುವಿನ ಪೂರ್ಣದೃಷ್ಟಿಗಳೆರಡರ ಸಾಕ್ಷಿ ಸಂಗಮವಾಗಿದ್ದವರು ಕಾರಣಿಕ ಯುಗಪುರುಷ ಹಾನಗಲ್ ಕುಮಾರ ಶಿವಯೋಗಿಗಳು. ಸಮಾಜವೆ ತಮ್ಮ ಮನೆಯೆಂದು ಭಾವಿಸಿ, ಜೀವನದುದ್ದಕ್ಕೂ ಸಮಾಜಕ್ಕಾಗಿ ಬದುಕಿದ ಅವರ ಜೀವನ ನಮಗೆ ದಾರಿದೀಪ ಎಂದರು.
ಶೋಭಾ ಆಡಿನ ಹಾಗೂ ಪ್ರೊ. ರಮೇಶ ಐನಾಪೂರ ಅವರನ್ನು ಸತ್ಕರಿಸಲಾಯಿತು. ಪ್ರೊ.ಬಿ.ಸಿ. ಹನಮಂತಗೌಡ್ರ, ವಿಶ್ರಾಂತ ಉಪತಹಸೀಲ್ದಾರ್‌ವಿ.ಜಿ. ಐನಾಪೂರ, ಉಣಕಲ್‌ದ ಬಸಯ್ಯ ಹಿರೇಮಠ, ಅಭಿಯಂತರ ವಿಶ್ವನಾಥ ಶಿರಹಟ್ಟಿಮಠ, ಶಾಂತಪ್ಪ ಆಡಿನ, ವೀರಯ್ಯ ವಸದ ಮತ್ತಿತರರಿದ್ದರು. ಪ್ರೊ.ಆರ್.ಬಿ. ಚಿನಿವಾಲರ ನಿರೂಪಿಸಿದರು, ಮಹಾಂತೇಶ ಹಿರೇಮಠ ಸ್ವಾಗತಿಸಿ ವಂದಿಸಿದರು.