

ಸಂಡೂರು: ಮಸಣ ಕಾರ್ಮಿಕರ ಗಣತಿ, ಪುನರ್ವಸತಿ ಹಾಗೂ ವಿಮುಕ್ತ ದೇವದಾಸಿಯರಿಗೆ ನಿವೇಶನ ನೀಡುವ ಕುರಿತು ರಾಜ್ಯ ಬಜೆಟ್‌ನಲ್ಲಿ ಕ್ರಮವಹಿಸಬೇಕು ಎಂದು ಮಸಣ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಆಗ್ರಹಿಸಿದರು.
ತಾಲೂಕಿನ ಕುಡತಿನಿಯಲ್ಲಿ ಶನಿವಾರ ಸಂಸದ ಈ.ತುಕಾರಾಮ್‌ಗೆ ಮನವಿ ಸಲ್ಲಿಸಿ ಮಾತನಾಡಿದರು. 45 ವಯಸ್ಸಿನ ಎಲ್ಲರಿಗೂ ಮಾಸಿಕ ಕನಿಷ್ಠ 3 ಸಾವಿರ ರೂ. ಪಿಂಚಣಿ ಒದಗಿಸಬೇಕು. ಕುಣಿ ಅಗೆದು ಮುಚ್ಚುವ ಕೆಲಸವನ್ನು ಉದ್ಯೋಗ ಖಾತ್ರಿ ಕೆಲಸವೆಂದು ಪರಿಗಣಿಸಿ ವೇತನ, ಕಾರ್ಮಿಕರಿಗೆ ಸುರಕ್ಷತಾ ಪರಿಕರಗಳನ್ನು ನೀಡಬೇಕು. ಸ್ಥಳೀಯ ಸಂಸ್ಥೆಗಳು ಮಸಣಕ್ಕೊಬ್ಬರಂತೆ ನಿರ್ವಾಹಕರನ್ನು ನೇಮಿಸಬೇಕು. ಮಸಣ ಕಾರ್ಮಿಕರ ಕುಟುಂಬಗಳಿಗೆ ತಲಾ ಐದು ಎಕರೆ ಜಮೀನು, ನಿವೇಶನ ಹಾಗೂ ಅವರ ಮಕ್ಕಳ ಮದುವೆಗೆ ಸಹಾಯ ಧನ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ 1993-94ನೇ ಸಾಲಿನಲ್ಲಿ ವಿಮುಕ್ತ ದೇವದಾಸಿಯರ ಸಮೀಕ್ಷೆ ಮಾಡಿತ್ತು. 2005ರಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಸ್ಥಾಪಿಸಿ ರಾಜ್ಯಾದ್ಯಂತ ವಿಮುಕ್ತ ದೇವದಾಸಿಯರ ಪರ ನಿರಂತರ ಹೋರಾಟ ಮಾಡುತ್ತಾ ಬರಲಾಗಿದೆ. ಬಳ್ಳಾರಿ ತಾಲೂಕಿನಲ್ಲಿ 886, ಕುರುಗೋಡಿನಲ್ಲಿ 547, ಕಂಪ್ಲಿಯಲ್ಲಿ 684, ಸಿರಗುಪ್ಪದಲ್ಲಿ 1074, ಸಂಡೂರಿನಲ್ಲಿ 1194 ವಿಮುಕ್ತ ದೇವದಾಸಿಯರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 4385 ವಿಮುಕ್ತ ದೇವದಾಸಿಯರು ಸಮೀಕ್ಷೆ ಪಟ್ಟಿಯಲ್ಲಿದ್ದಾರೆ. ಈ ಪೈಕಿ ಕೆಲವರು ಮರಣ ಹೊಂದಿದ್ದು, ಅವರ ಮಕ್ಕಳಿಗೆ ನಿವೇಶನ ಹಾಗೂ ಮನೆ ನಿರ್ಮಾಣಕ್ಕೆ ರಾಜೀವ್ ಗಾಂಧಿ ವಸತಿ ನಿಗಮದಿಂದ 8 ಲಕ್ಷ ರೂ. ನೀಡಬೇಕು ಎಂದು ಎ.ಸ್ವಾಮಿ ಒತ್ತಾಯಿಸಿದರು.