

ಚಿಕ್ಕಮಗಳೂರು: ಏಳನೇ ವೇತನ ಆಯೋಗದ ಅನುಷ್ಠಾನದ ವೇಳೆ 2022ರಿಂದ 2024ರ ಅವಧಿಯಲ್ಲಿ ನಿವೃತ್ತರಾಗಿರುವ ಅಧಿಕಾರಿಗಳು ಮತ್ತು ನೌಕರರಿಗೂ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ನಿವೃತ್ತ ನೌಕರರ ವೇದಿಕೆ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿಗೆ ಮನವಿ ಸಲ್ಲಿಸಿದರು.
ಏಳನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿಯಲ್ಲಿ 1.7.2022 ರಿಂದ 31.7.2024ರ ಅವಧಿಯಲ್ಲಿ ನಿವೃತ್ತರಾಗಿರುವ ಅಧಿಕಾರಿಗಳು ಮತ್ತು ನೌಕರರಿಗೂ ನಿವೃತ್ತಿ ಸೌಲಭ್ಯ ನೀಡಬೇಕು. ಪರಿಷ್ಕರಣೆಯಿಂದ ಹೆಚ್ಚಳವಾಗುವ ವೇತನ ಮತ್ತು ಭತ್ಯೆಯನ್ನು ನಗದಾಗಿ ಪಾವತಿಸಬೇಕುಎಂದು ತಿಳಿಸಿದರು.
1,7, 2022 ರಿಂದ 31.7.2024ರ ಅವಧಿಯಲ್ಲಿ ಸೇವೆಯಿಂದ ನಿವೃತ್ತರಾದ, ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಅಥವಾ ಸೇವೆಯಲ್ಲಿರುವುದು ಸಮಾಪ್ತಿಗೊಂಡ ಸರ್ಕಾರಿ ಪ್ರಕರಣಗಳಲ್ಲಿ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ನಿಗದಿಪಡಿಸಲಾದ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಲೆಕ್ಕ ಹಾಕುವ ಉದ್ದೇಶಗಳಿಗಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ನಿವೃತ್ತ ನೌಕರರ ವೇದಿಕೆ ಗೌರವಾಧ್ಯಕ್ಷ ಶರಶ್ಚಂದ್ರ, ಕಾರ್ಯದರ್ಶಿ ಕೆ.ಎನ್.ಮಂಜುನಾಥ ಭಟ್, ಸೋಮಶೇಖರ್, ಶೇಷಾದ್ರಿ ಹಾಜರಿದ್ದರು.