ಜನರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಿ

ಪಿರಿಯಾಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆ ಡಿ ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಮಾತನಾಡಿದರು. ಎಸ್ಇ ರಘುಪತಿ, ಡಾ.ನಾಗರಾಜ್, ಕುಂಇ ಅಹಮದ್,  ಸುನಿಲ್ ಕುಮಾರ್ ಮತ್ತಿತರರು ಇದ್ದಾರೆ.
ಪಿರಿಯಾಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆ ಡಿ ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಮಾತನಾಡಿದರು. ಎಸ್ಇ ರಘುಪತಿ, ಡಾ.ನಾಗರಾಜ್, ಕುಂಇ ಅಹಮದ್, ಸುನಿಲ್ ಕುಮಾರ್ ಮತ್ತಿತರರು ಇದ್ದಾರೆ.
Published on

ಪಿರಿಯಾಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡುವತ್ತ ವೈದ್ಯರು ಮತ್ತು ಸಿಬ್ಬಂದಿ ಕಾರ್ಯಯೋನ್ಮುಖರಾಗಬೇಕಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ತಾಕೀತು ಮಾಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಅನಿಲ್ ಅವರಿಂದ ಮಾಹಿತಿ ಪಡೆದ ಸಚಿವರು, ಈ ಆಸ್ಪತ್ರೆಯು ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಯಾಗಿದ್ದರೂ ಸಹ ಪ್ರತಿ ತಿಂಗಳು 25 ರಿಂದ 30 ಹೆರಿಗೆಗಳು ಮಾತ್ರ ಇಲ್ಲಿ ಆಗುತ್ತಿವೆ ಎಂದರೆ ವೈದ್ಯರ ನಿರ್ಲಕ್ಷೃ ಎದ್ದು ಕಾಣುತ್ತಿದೆ. ಹೆರಿಗೆಗಾಗಿ ಈ ಆಸ್ಪತ್ರೆಗೆ ಬರುವವರನ್ನು ನೆಪ ಹೇಳಿ ಮೈಸೂರು ಮತ್ತಿತರ ಖಾಸಗಿ ಆಸ್ಪತ್ರೆಗಳಿಗೆ ಸಾಗಹಾಕುವುದನ್ನು ಮೊದಲು ನಿಲ್ಲಿಸಿ ಎಂದು ಎಚ್ಚರಿಸಿದರು.

ಈ ಮೊದಲು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರಿಲ್ಲ ಎಂದು ಸಬೂಬು ಹೇಳುತ್ತಿದ್ದಿರಿ. ಈಗ ಆಸ್ಪತ್ರೆಗೆ ಮಹಿಳಾ ವೈದ್ಯರ ನೇಮಕವಾಗಿದೆ. ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಗರ್ಭಿಣಿಯರು ಹೆರಿಗೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ದಾಖಲಾಗಲು ಕ್ರಮ ವಹಿಸಿ ಎಂದು ಸೂಚಿಸಿದರು.

ಹೆರಿಗೆ ಆಸ್ಪತ್ರೆ ತೆರೆಯಲು ಕ್ರಮ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಕನಿಷ್ಟ 100 ಹೆರಿಗೆಗಳಾದಲ್ಲಿ ನೂತನ ಹೆರಿಗೆ ಆಸ್ಪತ್ರೆ ತೆರೆಯಲು ಕ್ರಮ ವಹಿಸಲಾಗುವುದು. ಈಗಾಗಲೇ ಆಸ್ಪತ್ರೆಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದರು. ಖಾಸಗಿ ಕಂಪನಿಯೊಂದರ ಸಿಎಸ್‌ಆರ್ ನಿಧಿಯಿಂದ ಆಸ್ಪತ್ರೆಗೆ ನಾಲ್ಕು ಹೊಸ ಡಯಾಲಿಸಿಸ್ ಯಂತ್ರಗಳು ಬರುತ್ತಿದ್ದು ಅದರ ಅನುಷ್ಠಾನಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಿ. ಅಲ್ಲದೆ ಅನ್ಯ ವ್ಯಕ್ತಿಗಳು ಆಸ್ಪತ್ರೆಗೆ ಬಂದು ವೈದ್ಯರು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಪೊಲೀಸರಿಗೆ ದೂರು ನೀಡಿ. ಜತೆಗೆ ಪಟ್ಟಣದ ಆಸ್ಪತ್ರೆಯ ಅಭಿವೃದ್ಧಿ ಕುರಿತಂತೆ ಯಾವುದೇ ವಿಷಯಗಳಿದ್ದಲ್ಲಿ ಮೊದಲು ಉಪ ವಿಭಾಗಾಧಿಕಾರಿಗಳ ಗಮನಕ್ಕೆ ತನ್ನಿ ಎಂದು ಸಚಿವರು ಸೂಚಿಸಿದರು.

ಡಿಜಿಟಲ್ ಲೈಬ್ರರಿ ತೆರೆಯಿರಿ: ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಅವರಿಂದ ಶಿಕ್ಷಣ ಇಲಾಖೆಗೆ ಕುರಿತು ಮಾಹಿತಿ ಪಡೆದ ಸಚಿವರು, ಮಕ್ಕಳ ಕಲಿಕಾ ಅಭಿವೃದ್ಧಿಗೆ ಸಂಬಂಧಿಸಿದಂತೆ ಡಿಜಿಟಲ್ ಲೈಬ್ರರಿಗಳನ್ನು ತೆರೆಯಲು ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚಿಸಿದರು. ವಿವೇಕ ಯೋಜನೆಯಡಿ ತಾಲೂಕಿಗೆ 25 ಶಾಲಾ ಕೊಠಡಿಗಳು ಮಂಜೂರಾಗಿದ್ದು, ಈವರೆಗೆ 21 ಕೊಠಡಿಗಳು ಸಂಪೂರ್ಣಗೊಂಡಿವೆ ಎಂದು ಬಿಇಒ ಬಸವರಾಜು ಎಂದು ಸಚಿವರ ಗಮನ ಸೆಳೆದರು. ತಾಪಂ ಇಒ ಸುನಿಲ್ ಕುಮಾರ್ ಮಾತನಾಡಿ, ತಾಲೂಕಿನ ಹಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಬಹುತೇಕ ಶಾಲೆಗಳಲ್ಲಿ ಶೌಚಗೃಹಗಳು ದುಸ್ಥಿತಿಯಲ್ಲಿವೆ ಎಂದು ಹೇಳಿದರು. ಶೌಚಗೃಹಗಳ ನಿರ್ವಹಣೆಗೆ ಹೊರಗುತ್ತಿಗೆ ಸಿಬ್ಬಂದಿ ನೇಮಿಸಿಕೊಳ್ಳುವ ಮೂಲಕ ಸ್ವಚ್ಛತೆ ಕಾಯ್ದುಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಶಾಲೆ ಸ್ವಚ್ಛಗೊಳಿಸುವುದೇ ಕೆಲಸ: ಕೆಲವು ಗ್ರಾಮಗಳಲ್ಲಿ ಶಾಲಾ ಆವರಣಗಳನ್ನು ಪುಂಡರು ರಾತ್ರಿ ವೇಳೆ ಮತ್ತು ರಜಾ ದಿನಗಳಲ್ಲಿ ಕುಡಿತಕ್ಕೆ ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ. ಪ್ರತಿನಿತ್ಯ ಮುಂಜಾನೆ ಶಾಲೆಗೆ ಬರುವ ಶಿಕ್ಷಕರಿಗೆ ಶಾಲಾ ಆವರಣ ಸ್ವಚ್ಛಗೊಳಿಸುವುದೇ ತ್ರಾಸವೆನಿಸಿದೆ ಎಂದು ಬಿಇಒ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಸಿದ ಸಚಿವ ವೆಂಕಟೇಶ್ ಈ ಸಂಬಂಧ ಬಿಗಿ ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ತಪ್ಪು ತಿದ್ದಿಕೊಳ್ಳದಿದ್ದರೆ ಕಷ್ಟ: ಯಾವ ಎಂಜಿನಿಯರ್‌ಗಳೂ ಕಾಮಗಾರಿ ನಡೆಯುವ ಸ್ಥಳಕ್ಕೆ ಹೋಗಿ ಪರಿಶೀಲಿಸುತ್ತಿಲ್ಲ. ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡುತ್ತಿದ್ದೀರಿ ಎಂದು ಅಧಿಕಾರಿಗಳ ವಿರುದ್ಧ ಗರಂ ಆದ ಸಚಿವರು, ನಿಮ್ಮ ಹಳೇ ಚಾಳಿ ಬಿಟ್ಟು ಗುಣಮಟ್ಟದ ಕಾಮಗಾರಿಗೆ ಕ್ರಮ ವಹಿಸಬೇಕು. ಅಲ್ಲದೆ ಕೆಲವು ಅಧಿಕಾರಿಗಳು ಮಾಡುತ್ತಿರುವ ತಪ್ಪು ಕೆಲಸಗಳು ಹಾಗೂ ಭ್ರಷ್ಟಾಚಾರದ ಸಂಗತಿ ನನಗೆ ತಲುಪುತ್ತಿದೆ. ನಿಮ್ಮ ತಪ್ಪನ್ನು ತಿದ್ದಿಕೊಳ್ಳದಿದ್ದರೆ ನಿಮಗೇ ಕಷ್ಟವಾಗಲಿದೆ ಎಂದು ಎಚ್ಚರಿಸಿದರು.

ಅಧಿಕಾರಿಗಳು ತರಾಟೆಗೆ: ಆಹಾರ ಇಲಾಖೆಯವರು ಕಳೆದ 5 ವರ್ಷಗಳಿಂದ ರಾಗಿ ಖರೀದಿ ವೇಳೆ ಪ್ರತಿ ರೈತರಿಂದ 4 ಕೆ.ಜಿ ಕಡಿತ ಮಾಡಿಕೊಂಡಿದ್ದೀರಿ. ಇದರಿಂದ ಎಷ್ಟು ಮೊತ್ತ ಸಂಗ್ರಹವಾಗಿದೆ, ಯಾರೆಲ್ಲ ಹಂಚಿಕೊಂಡಿದ್ದೀರಿ ಎಂಬುದು ನನಗೆ ತಿಳಿದಿದೆ ಎಂದು ಸಚಿವ ಕೆ.ವೆಂಕಟೇಶ್ ಆಹಾರ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಬಕಾರಿ ಇನ್ಸ್‌ಪೆಕ್ಟರ್ ಧರ್ಮರಾಜ್ ಇಲಾಖೆಯ ಪ್ರಗತಿ ಕುರಿತು ಮಾಹಿತಿ ನೀಡುವ ಸಂದರ್ಭ ಸಿಟ್ಟಾದ ಸಚಿವರು, ತಾಲೂಕಿನ ಹಲವು ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಲಾಗುತ್ತಿದೆ. ಮಾಮೂಲಿ ವಸೂಲಿ ಮಾಡಿಕೊಂಡು ಕೈಕಟ್ಟಿ ಕುಳಿತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ತಾಲೂಕಿನಲ್ಲಿ ಸಿಎಲ್ 7 ಮದ್ಯ ಪರವಾನಗಿ ಹೊಂದಿರುವ ಬಾರ್ ಅಂಡ್ ರೆಸ್ಟೋರೆಂಟ್‌ಗಳಿಂದ ಹೊರಗಡೆ ಅಕ್ರಮವಾಗಿ ಮದ್ಯ ಸಬರಾಜು ಆಗುತ್ತಿದೆ. ತಪ್ಪಿತಸ್ಥರ ವಿರುದ್ಧ ಬಿಗಿ ಕ್ರಮ ಕೈಗೊಳ್ಳಬೇಕು. ಮುಂದಿನ ಸಭೆಗೆ ಬರುವಷ್ಟರಲ್ಲಿ ಪ್ರಕರಣ ದಾಖಲಿಸಿರಬೇಕು ಎಂದು ಸಚಿವರು ಸೂಚಿಸಿದರು. ಸಭೆಯಲ್ಲಿ ನೀರಾವರಿ ಇಲಾಖೆಯ ಎಸ್‌ಇ ರಘುಪತಿ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ನಾಗರಾಜ್, ತಹಸೀಲ್ದಾರ್ ಕುಂಇ ಅಹಮದ್‌ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳಾದ ಮಲ್ಲಿಕಾರ್ಜುನ್, ಕೃಷ್ಣಮೂರ್ತಿ, ವೆಂಕಟೇಶ್, ಬಸವರಾಜು, ಕಿರಣ್ ಕುಮಾರ್, ಡಾ.ಶ್ರೀನಿವಾಸ್, ಮಮತಾ, ಡಾ.ಸೋಮಯ್ಯ, ಕೆ.ವಿ.ಶ್ರೀಧರ್, ದೀಪಕ್, ಮಾದೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net