

ಬನ್ನೂರು: ಯಾವುದೇ ನಿಷೇಧಿತ ಪ್ಲಾಸ್ಟಿಕ್, ಕೃತಕ ಬಣ್ಣ ಬಳಸದ ಆಹಾರ, ಶುದ್ಧ ನೀರು ಪೂರೈಕೆ, ಸ್ವಚ್ಛತೆಯೊಂದಿಗೆ ಗ್ರಾಹಕರಿಗೆ ಪೂರೈಕೆ ಮಾಡಬೇಕು ಎಂದು ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ ಮತ್ತು ಆಹಾರ ಸುರಕ್ಷತೆ ತರಬೇತಿಯ ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ಜಿ.ಎಸ್.ಸುಮಂತ್ ತಿಳಿಸಿದರು.
ಪಟ್ಟಣದ ಸಂತೆಮಳದಲ್ಲಿರುವ ಫಾಸ್ಟ್‌ಫುಡ್ ಆಹಾರ ತಯಾರಿಕಾ ಘಟಕಗಳು ಮತ್ತು ಹೋಟೆಲ್‌ಗಳಿಗೆ ಬೆಳಿಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿ,
ಕಳಪೆ ಆಹಾರ ಪದಾರ್ಥ ಮಾರಾಟ ಮಾಡಿದರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎನ್ನುವ ಎಚ್ಚರಿಕೆ ನೀಡಿದರು.
ಈಗಾಗಲೇ ಈ ಸಂಬಂಧವಾಗಿ ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ 3 ಪ್ರಕರಣ, ಅಸುರಕ್ಷಿತ ಆಹಾರ ತಯಾರಿಕೆ ಮತ್ತು ಮಾರಾಟ ಸಂಬಂಧ 4 ಪ್ರಕರಣ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾಖಲಾಗಿದೆ ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಕಳಪೆ ಆಹಾರ ಪದಾರ್ಥಗಳನ್ನು ಸಾರ್ವಜನಿಕರಿಗೆ ನೀಡಬಾರದು. ಒಂದು ವೇಳೆ ಸಾರ್ವಜನಿಕರಿಗೆ ಕಳಪೆ ಆಹಾರ ಮಾರಾಟ ತಿಳಿದಲ್ಲಿ ನೇರವಾಗಿ ತಮಗೆ ಮಾಹಿತಿ ನೀಡಬಹುದು ಎಂದು ತಿಳಿಸಿದರು.
ನಂತರ ನಿತ್ಯದ ಆಹಾರ ಘಟಕಗಳಾದ ತಳ್ಳೋಗಾಡಿ, ಬೀದಿಬದಿ ವ್ಯಾಪಾರಿಗಳು, ಮೋಬೈಲ್ ಫುಡ್ ವೆಂಡರ್ಸ್‌ಗಳಿಗೆ ಉಚಿತವಾಗಿ 5 ವರ್ಷದ ಅವಧಿಯ ಆಹಾರ ಸುರಕ್ಷತೆ ನೋಂದಣಿ ಪ್ರಮಾಣ ಪತ್ರವನ್ನು ಸ್ಥಳದಲ್ಲಿ ಉಚಿತವಾಗಿ ವಿತರಿಸಲಾಯಿತು.
ಇದೂವರೆಗೂ ಯಾರು ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ ಮತ್ತು ಆಹಾರ ಸುರಕ್ಷತೆ ತರಬೇತಿಯ ಪ್ರಮಾಣ ಪತ್ರ ಮತ್ತು ನೋಂದಣಿ ಆಗಿಲ್ಲವೋ ಅಂತಹವರು ಕೂಡಲೇ ನೋಂದಣಿ ಮಾಡಿಸಿ, ಪ್ರಮಾಣ ಪತ್ರ ಪಡೆದುಕೊಳ್ಳುವಂತೆ ಸಲಹೆ ನೀಡಿದರು.