

ಮೈಸೂರು: ವಸತಿ ನಿಲಯ ಶಾಲೆಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಶೋಷಣೆಗೆ ಒಳಗಾದವರ ಮಕ್ಕಳೇ ಹೆಚ್ಚಾಗಿ ಓದುತ್ತಾರೆ. ಇಂತಹ ಮಕ್ಕಳಿಗೆ ಉತ್ತಮ ವ್ಯವಸ್ಥೆಯೊಂದಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂ ಖ್ಯಾತರ ಕಲ್ಯಾಣ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗದಲ್ಲಿ ಭಾನುವಾರ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ಪ್ರಾಂಶುಪಾಲರು ಮತ್ತು ನಿಲಯ ಮೇಲ್ವಿಚಾರಕರಿಗೆ ಏರ್ಪಡಿಸಿದ್ದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಜ್ಞಾನ ಯಾರದೋ ಒಬ್ಬರ ಸ್ವತ್ತಲ್ಲ. ಇಂದು ದೊಡ್ಡ ಅಧಿಕಾರ ಸ್ಥಾನದಲ್ಲಿರುವವರು ಬಡವರ ಮಕ್ಕಳೇ ಆಗಿದ್ದಾರೆ. ಹೀಗಾಗಿ ಬಡವರು ಹಾಗೂ ಶತಮಾನಗಳಿಂದ ಶಿಕ್ಷಣದಿಂದ ವಂಚಿತರಾದವರ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕೆಂಬುದು ನಮ್ಮ ಸರ್ಕಾರದ ಪ್ರಮುಖ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಶಿಕ್ಷಕರು ಅತ್ಯಂತ ಜವಾಬ್ದಾರಿ, ಹೊಣೆಗಾರಿಕೆ ಮತ್ತು ಬದ್ಧತೆಯಿಂದ ಕಲಿಸಬೇಕು ಎಂದು ಹೇಳಿದರು.
ಶಿಕ್ಷಣ ಎಂಬುದು ಬೆಳೆಯುವ ಮಕ್ಕಳಿಗೆ ಅತ್ಯಂತ ಪ್ರಮುಖ. ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು ಎಂದು ನಮ್ಮ ಸಂವಿಧಾನದಲ್ಲಿದೆ. ವೈಜ್ಞಾನಿಕ ಮತ್ತು ವೈಚಾರಿಕ ಶಿಕ್ಷಣ ಬೆಳಕಿನೆಡೆಗೆ ಕರೆದೊಯ್ಯುತ್ತದೆ ಎಂದು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದಾರೆ. ಹೀಗಾಗಿ ಸಂವಿಧಾನದ ತತ್ವ, ಆದರ್ಶ ಅನ್ವಯ ಶಿಕ್ಷಣ ಕಲಿಸಿದರೆ ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿ ಹೆಚ್ಚುತ್ತದೆ. ಇದರಿಂದ ಒಳ್ಳೆಯ ಸಮಾಜ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ಮಾತನಾಡಿ, ಮನೆಗೆ ಅನ್ವರ್ಥವಾಗಿ ವಿದ್ಯಾರ್ಥಿನಿಲಯವಾಗಿದೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ನಿಲಯ ಪಾಲಕರ ಜವಾಬ್ದಾರಿ ಬಹಳಷ್ಟಿದೆ. ಈ ನಿಟ್ಟಿನಲ್ಲಿ ನಿಲಯಪಾಲಕರು ಮಕ್ಕಳನ್ನು ನೈಜ ಪಾಲಕರಂತೆ ಮಾನಸಿಕವಾಗಿ, ದೈಹಿಕವಾಗಿ ಸದೃಢರನ್ನಾಗಿ ಮಾಡಬೇಕು. ಜೀವನ ರೂಪಿಸಿಕೊಳ್ಳವಂಥ ಮಾರ್ಗದರ್ಶನವನ್ನು ಮಕ್ಕಳಿಗೆ ನೀಡಬೇಕು. ವೈಯಕ್ತಿಕ, ಸಾಮಾಜಿಕ ಮತ್ತು ಕೌಟಂಬಿಕ ಜವಾಬ್ದಾರಿ ಹೆಚ್ಚಿಸುವಲ್ಲಿ ಕ್ರಿಯಾಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಲಹೆಗಾರ ಡಾ.ತುಕಾರಾಂ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಲಹೆಗಾರ ಬಸವರಾಜ್ ದೇವನೂರು, ಸಂಪನ್ಮೂಲ ವ್ಯಕ್ತಿ ಹೇಮಚಂದ್ರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ, ಯೋಜನಾ ನಿರ್ದೇಶಕ ಮುನಿರಾಜು, ಮುಡಾ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಹಾಗೂ ಇತರರು ಇದ್ದರು.