

ಕಂಪ್ಲಿ: ಶಿಬಿರದಲ್ಲಿ ಮಕ್ಕಳು ಕಲಿತ ವಿದ್ಯೆಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಗುರಿ ತಲುಪುವಂತೆ ಪಾಲಕರು ನೋಡಿಕೊಳ್ಳಬೇಕು ಎಂದು ಶ್ರೀಪೇಟೆ ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಿ.ವೀರಪ್ಪ ಹೇಳಿದರು.
ಪಟ್ಟಣದ ಶ್ರೀಪೇಟೆ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಕಾಶಿ ವಿಶ್ವರಾಧ್ಯ ಗುರುಕುಲ ಹಮ್ಮಿಕೊಂಡಿದ್ದ ಬೇಸಿಗೆ ವೈದಿಕ ಶಿಬಿರ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಶನಿವಾರ ಮಾತನಾಡಿದರು. ಕಲಿತ ವಿದ್ಯೆಯು ವ್ಯರ್ಥವಾಗದಂತೆ ನೋಡಿಕೊಂಡು ಪ್ರತಿನಿತ್ಯ ಮನನ ಮಾಡಿಕೊಳ್ಳಬೇಕು. ಸಂಸ್ಕಾರ, ಆಚಾರ ವಿಚಾರಗಳಿಂದ ವಿಮುಖರಾಗಬಾರದು. ಮುಂದೆ ಗುರಿ ಹಿಂದೆ ಗುರು ಇದ್ದರೆ ಮಾತ್ರ ಸಾಧನೆ ಸಾಧ್ಯವಾಗುತ್ತದೆ ಎಂದರು.
ಕಲ್ಯಾಣಿ ಚೌಕಿಮಠದ ಬಸವರಾಜ ಶಾಸ್ತ್ರಿಗಳು ಮಾತನಾಡಿ, ಕಾಶಿ ವಿಶ್ವರಾಧ್ಯ ಗುರುಕುಲ ಪ್ರಾಚಾರ್ಯ ಕೆ.ಸಿ.ಸಿದ್ಧರಾಮೇಶ್ವರ ಶಾಸ್ತ್ರಿಗಳು ಏ.2ರಿಂದ ಮೇ.31ರವರೆಗೆ ಮಕ್ಕಳಿಗೆ ನಿತ್ಯಸ್ತ್ರೋತ್ರ ಪಠಣ, ಗುರುಧ್ಯಾನ, ಸಂಕಲ್ಪ, ಗಣಪತಿ ಪೂಜಾ, ಕಲಶ ಸ್ಥಾಪನೆ, ಶೋಡೋಪಚಾರ, ನೀತಿ ಕಥೆಗಳ ಬೋಧನೆ ನೀಡಿದ್ದಾರೆ. ಇದರಿಂದ ಮಕ್ಕಳಿಗೆ ವೈದಿಕ ಸಂಪ್ರದಾಯದ ಅರಿವಾಗುತ್ತದೆ. ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಶ್ರದ್ಧೆ ಬೆಳೆಸಿಕೊಳ್ಳುತ್ತಾರೆ. ಪಾಲಕರನ್ನು ಗೌರವಿಸುವ ಮನೋಭಾವ ಬೆಳೆಯುತ್ತದೆ ಎಂದರು.
ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಿಶ್ವರಾಧ್ಯ ಗುರುಕುಲ ಸಂಸ್ಥಾಪಕ ಕೆ.ಎಂ.ಚಂದ್ರಶೇಖಯ್ಯ, , ಪೇಟೆ ಬಸವೇಶ್ವರ ದೇವಸ್ಥಾನ ಸಮಿತಿ ಕಾರ್ಯದರ್ಶಿ ಜವುಕಿನ ಸತೀಶ್, ಸಾಂಗತ್ರಯ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಘನಮಠದಯ್ಯ ಹಿರೇಮಠ, ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಸಂತೋಷ್ ಕೊಟ್ರಪ್ಪ ಸೋಗಿ, ಕಾರ್ಯದರ್ಶಿ ಬಿ.ಎಚ್.ಎಂ.ಅಮರನಾಥಶಾಸ್ತ್ರಿ, ಕಸಾಪ ತಾಲೂಕು ಕಾರ್ಯದರ್ಶಿ ಬಂಗಿ ದೊಡ್ಡ ಮಂಜುನಾಥ ಇತರರಿದ್ದರು.