

ಜಮಖಂಡಿ: ನಗರ ಜನತೆಗೆ ಶುದ್ಧ ನೀರು ಪೂರೈಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ತಿಳಿಸಿದರು.
ನಗರದ ನೀರು ಶುದ್ಧೀಕರಣ ಘಟಕಕ್ಕೆ ಅಧಿಕಾರಿಗಳು, ತಂತ್ರಜ್ಞರೊಂದಿಗೆ ಮಂಗಳವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರದ ಶುದ್ಧೀಕರಣ ಘಟಕದ ನೀರಿನಲ್ಲಿಯ ಕಲ್ಮಶ ವಿಂಗಡಿಸುವ ಬಗ್ಗೆ ಬೆಳಗಾವಿಯ ನುರಿತ ತಜ್ಞರು ಸೂಕ್ತ ಸಲಹೆ ನೀಡಿದ್ದಾರೆ. ಇದನ್ನು ಕಾರ್ಯರೂಪಕ್ಕೆ ತರಲಾಗುವುದು. ಇದರಿಂದ ನಗರದ ಜನತೆಗೆ ಶುದ್ಧವಾದ ನೀರು ಲಭ್ಯವಾಗಲಿದೆ ಎಂದು ತಿಳಿಸಿದರು.
ನೀರು ಶುದ್ಧೀಕರಣ ಘಟಕದಲ್ಲಿನ ಹಾಳಾದ ಯಂತ್ರಗಳನ್ನು ಕೂಡಲೇ ರಿಪೇರಿ ಮಾಡಿಸುವಂತೆ, ಮೇಲಿಂದ ಮೇಲೆ ನೀರಿನ ಗುಣಮಟ್ಟ ಪರೀಕ್ಷಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ನದಿಯಿಂದ ಬಂದ ನೀರನ್ನು ಶುದ್ಧೀಕರಿಸದೆ ನಗರ ಜನತೆಗೆ ಪೂರೈಸುವುದು ಸರಿಯಲ್ಲ, ಕೂಡಲೇ ಶುದ್ಧೀಕರಣಕ್ಕೆ ಬೇಕಾದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದೂ ತಿಳಿಸಲಾಗಿದೆ ಎಂದು ಹೇಳಿದರು.
ಎಸಿ ಸಂತೋಷ ಕಾಮಗೌಡ, ತಹಸೀಲ್ದಾರ್ ಸದಾಶಿವ ಮಕ್ಕೋಜಿ, ನೀರು ಶುದ್ಧೀಕರಣ ತಜ್ಞ ಕೇಶವ ಮ್ಯಾಕಲಾ ಇತರರಿದ್ದರು.