

ಮೈಸೂರು: ಜಮ್ಮು ಕಾಶ್ಮೀರದ ವೈಷ್ಣೋ ದೇವಿ ಮಂದಿರಕ್ಕೆ ತೆರಳುತ್ತಿದ್ದ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿ ಹತ್ಯೆಗೈದಿರುವುದು ಆತಂಕಕಾರಿ ವಿಚಾರ. ಕೂಡಲೇ ಹಿಂದು ಯಾತ್ರಿಕರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು.
ಉಗ್ರರ ದಾಳಿಗೆ 19 ಹಿಂದು ಯಾತ್ರಿಕರು ಮೃತಪಟ್ಟಿದ್ದಾರೆ. 40 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಭಯೋತ್ಪಾದಕರ ದಾಳಿಯಿಂದ ದೇಶ ಆಘಾತಕ್ಕೆ ಒಳಗಾಗಿದೆ. ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದು ಪಡಿಸಿದ ನಂತರ ಜಮ್ಮು ಕಾಶ್ಮೀರ ಸಹಜ ಸ್ಥಿತಿಗೆ ಮರಳಿತ್ತು. ಆದರೆ, ಇದೀಗ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ದೇಶದಲ್ಲಿ ನೆಲೆಸಿರುವ ಪ್ರತಿಯೊಂದು ಉಗ್ರರನ್ನು ಮಟ್ಟ ಹಾಕಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವರಾಜ್‌ಗೆ ನೀಡಿರುವ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಮಹೇಶ್ ಕಾಮತ್, ಕಾರ್ಯದರ್ಶಿ ಮಧುಶಂಕರ್, ವಿಭಾಗ ಮಾತೃ ಶಕ್ತಿ ಪ್ರಮುಖ್ ಸವಿತಾ ಘಾಟ್ಕೆ, ಪ್ರಮುಖರಾದ ಜಗದೀಶ್ ಹೆಬ್ಬಾರ್, ಅಂಬಿಕಾ, ಶೈಲಜಾ, ಮರಿಯಪ್ಪ, ಲೋಕೇಶ್, ಶಿವರಾಜ್ ಹಾಗೂ ಇತರರು ಇದ್ದರು.