

ತಿಪಟೂರು: ಸೇವಾವಧಿ ಮುಗಿದಿರುವ ವಾಹನಗಳನ್ನು ಬಳಸಿಕೊಂಡು ಪೌರಕಾರ್ಮಿಕರ ಜೀವದ ಜತೆ ಚೆಲ್ಲಾಟ ಬೇಡ ಎಂದು ನಗರಸಭೆ ಸದಸ್ಯರು ಅಧಿಕಾರಿಗಳಿಗೆ ಎಚ್ಚರಿಸಿದರು.
ನಗರಸಭೆ ಸಭಾಂಗಣದಲ್ಲಿ ಸೋಮವಾರ ಪ್ರಭಾರ ಅಧ್ಯಕ್ಷೆ ಮೇಘನಾ ಎಸ್.ಭೂಷಣ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ, ಮನೆ, ಮನೆ ಕಸ ಸಂಗ್ರಹಣೆಗೆ ಬಳಸಲಾಗುತ್ತಿದ್ದ ಟ್ರಾ$್ಯಕ್ಟರ್ಗಳ 15 ವರ್ಷಗಳ ಸೇವಾವಧಿ ಮುಕ್ತಾಯಗೊಂಡಿವೆ. ಅವುಗಳನ್ನು ಸೇವೆಯಿಂದ ಹಿಂಪಡೆದು. ನಗರ ಸಮೀಪದ ಸಂಸ್ಕರಣೆ ಘಟಕದಲ್ಲಿ ಉಪಯೋಗಿಸಲು ಸಭೆಯ ಅನುಮತಿ ಕೋರಿದಾಗ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಟಿ.ಎನ್.ಪ್ರಕಾಶ್, ಸೇವಾವಧಿ ಮುಗಿದಿರುವ ವಾಹನಗಳನ್ನು ಸಂಸ್ಕರಣಾ ಘಟಕದಲ್ಲಿ ಬಳಸುವಾಗ ಅನಾಹುತ ಸಂಭವಿಸಿದರೆ ನಯಾಪೈಸೆ ವಿಮಾ ಹಣ ಬರಲ್ಲ. ಪೌರ ಕಾರ್ಮಿಕರಿಗೆ ತೆಂದರೆ ಆದರೆ ಯಾರು ಹೊಣೆ. ಈ ರೀತಿ ಪೌರ ಕಾರ್ಮಿಕರ ಜೀವದ ಜತೆ ಚೆಲ್ಲಾಟವಾಡಬೇಡಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಸಣ್ಣ ನೀರಾವರಿ ಇಲಾಖೆಗೆ ಸೇರಿದ ನಗರಸಭೆ ವ್ಯಾಪ್ತಿಯಲ್ಲಿನ ರಾಜಕಾಲುವೆಯ ಗಿಡಗಂಟೆಗಳನ್ನು ತೆಗೆದು ಸ್ವಚ್ಛಗೊಳಿಸಿ ಹೂಳೆತ್ತುವ ಕಾಮಗಾರಿ ಕೈಗೊಳ್ಳುವ ಪ್ರಸ್ತಾವನೆ ಮಾಡಿದಾಗ ವಿರೋಧ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯ ಪಿ.ಜೆ.ರಾಮಮೋಹನ್, ಪ್ರತಿ ಬಾರಿ ಕೊಳವೆ ಬಾವಿಗಳಿಗೆ ಕೇಬಲ್, ಪೈಪ್ಗಳು, ಸ್ಟಾರ್ಟರ್, ಮೋಟಾರ್ ಖರೀದಿಯ ಪ್ರಸ್ತಾವನೆ ಇಡುತ್ತೀರಿ, ತುರ್ತು ಪರಿಸ್ಥಿತಿಗಳಲ್ಲಿ ಅಗತ್ಯವಿರುವಲ್ಲಿ ಕೊಳವೆಬಾವಿ ಕೊರೆಸಲು ಪ್ರತಿ ಕೊಳವೆ ಬಾವಿಗೆ 7 ಲಕ್ಷ ರೂ. ನಿಗದಿ ಪಡಿಸಲಾಗಿದೆ. ಹಾಗಿದ್ದರೆ ಆ ಹಣ ಖರ್ಚು ಮಾಡಿರುವುದಕ್ಕೆ ಲೆಕ್ಕ ಕೊಡಿ ಎಂದು ಒತ್ತಾಯಿಸಿದರು.
ಮೇ.25ರಂದು ಬೀದಿನಾಯಿಗಳ ದಾಳಿಗೆ ತುತ್ತಾಗಿ ಮಡೇನೂರಿನ 6 ವರ್ಷದ ಬಾಲಕಿ ನವ್ಯಾ ಮೃತಪಟ್ಟ ಘಟನೆ ನಂತರ ಮೈಕೊಡವಿಕೊಂಡಂತೆ ವರ್ತಿಸಿದ ತಾಲೂಕು ಆಡಳಿತ ಮತ್ತು ಸ್ಥಳಿಯ ನಗರಸಭೆ, ಎಲ್ಲೆಡೆ ಬೀದಿನಾಯಿಗಳಿಗೆ ಸಂತಾನ ಶಕ್ತಿ ಹರಣ ಚುಚ್ಚುಮದ್ದು ನೀಡುವ ಆಂದೋಲನದ ರೀತಿ ಕೈಗೊಳ್ಳಲಾಗಿದೆ ಎಂದು ಬಿಂಬಿಸಿತ್ತು. ಆದರೆ ಸೋಮವಾರದ ಸಭೆಯಲ್ಲಿ ಆಯುಕ್ತ ವೀಶ್ವೇಶ್ವರ ಬದರಗಡೆ, ನಗರ ಸಮೀಪದ ಬಂಡಿಹಳ್ಳಿ ಬಳಿ 60 ಲಕ್ಷ ರೂ. ವೆಚ್ಚದಲ್ಲಿ ಶೆಡ್ ನಿರ್ಮಿಸಿ ಬೀದಿ ನಾಯಿ ಹಿಡಿದು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದಾಗ, ವಿರೊಧ ವ್ಯಕ್ತಪಡಿಸಿದ ರಾಮಮೋಹನ್ ತಾತ್ಕಲಿಕ ಶೆಡ್ ನಿಮಾರ್ಣಕ್ಕೆ ಸಾರ್ವಜನಿಕರ ತೆರಿಗೆ ಲಕ್ಷ ಖರ್ಚು ಮಾಡುವ ಬದಲು. ಕಲ್ಲೇಗೌಡನಪಾಳ್ಯ ಸಮೀಪ ದಶಕಗಳ ಕಾಲದಿಂದ ಹಾಳು ಬಿದ್ದಿರುವ ರೇಷ್ಮೇ ಇಲಾಖೆಯ ಕಟ್ಟಡ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಯಾರೋ ದಾನಿಗಳು ಕೊಟ್ಟ ಚಿಕ್ಕದೊಂದು ಗಡಿಯಾರ ಅಳವಡಿಸಲು ಹೈಮಾಸ್ಕ್ ದೀಪ ತೆರವುಗೊಳಿಸಿದ್ದೂ ಅಲ್ಲದೆ. ಅದರ ಜಾಗದಲ್ಲಿ ಮತ್ತೊಂದು ಹೊಸ ದೀಪ ಅಳವಡಿಸುವ ಪ್ರಸ್ತಾವನೆಗೆ ಸದಸ್ಯರು ವಿರೋಧಿ ವ್ಯಕ್ತಪಡಿಸಿದರು. ತಿಪಟೂರು ತಾಲೂಕು ಹಳೇ ಮೈಸೂರು ಪ್ರಾಂತ್ಯಕ್ಕೆ ಸೇರಿದ್ದಾಗಿದ್ದು, ಎಲ್ಲರ ನೆನಪಿನಲ್ಲಿ ಉಳಿಯುವಂತ ಬೀದಿದೀಪ ಅಳವಡಿಸಿ ನಗರದ ಘನತೆ ಹೆಚ್ಚಿಸಿ ಮತ್ತು ಇದಕ್ಕಾಗಿ ಯಾರ ಬಳಿಯೂ ಹಣಕ್ಕಾಗಿ ಅಂಗಲಾಚಬೇಡಿ ಎಂದ ಸದಸ್ಯರು, 60 ಲಕ್ಷ ರೂ. ವೆಚ್ಚದಲ್ಲಿ ಕಚೇರಿಯ ಪೀಠೋಪಕರಣ ಖರೀದಿಗೆ ಅನುಮಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಶಾಸಕ ಕೆ.ಷಡಕ್ಷರಿ, ಸದಸ್ಯರು ಮತ್ತು ಅಧಿಕಾರಿಗಳು ಇದ್ದರು.
ಯು.ಜಿ.ಡಿ ಸಮಸ್ಯೆ ಚರ್ಚೆ
ಈಗಾಗಲೇ ಅಂದಾಜು 42 ಕೋಟಿ ರೂ. ವೆಚ್ಚದಲ್ಲಿ ನಗರದಾದ್ಯಂತ ಯು.ಜಿ.ಡಿ.ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದ್ದರೂ. ಸ್ವಚ್ಛ ಭಾರತ್ ಮಿಷನ್-&2 ಅಡಿಯಲ್ಲಿ ಇಂಟರ್ ಸೆಕ್ಷನ್ ಡೈವರ್ಷನ್ ಘಟಕದಡಿ ನಗರಸಭೆಗೆ ನಾಲ್ಕೂವರೆ ಕೋಟಿ ಅನುದಾನ ಮಂಜೂರಾಗಿದೆ. ಸದರಿ ಯೋಜನೆಯಡಿ ಒಳಚರಂಡಿ ವ್ಯವಸ್ಥೆಗೆ ಒಳಪಡದ ಪ್ರದೇಶ ಹಾಗೂ ಮನೆಗಳ ಚರಂಡಿಗಳ ಮೂಲಕ ಹರಿದುಬರುದ ಯುಜಿಡಿ ನೀರನ್ನು ಒಳಚರಂಡಿ ವ್ಯವಸ್ಥೆಗೆ ಸಂಪರ್ಕಿಸುವ ಯೋಜನೆ ಕೈಗೊಳ್ಳಲಾಗುವುದು ಎಂದು ಸಭೆಗೆ ಇಂಜಿನಿಯರ್ ಮಿಥುನ್ ಕುಮಾರ್ ವಿವರಿಸಿದರು.
ನಾಳೆಗೆ ಅವಧಿ ಮುಕ್ತಾಯ
ಅ.30ಕ್ಕೆ ನಗರಸಭೆ ಚುನಾಯಿತ ಸದಸ್ಯರ ಅವಧಿ ಮುಕ್ತಾಯಗೊಳ್ಳುವ ಕಾರಣ ತರಾತುರಿಯಲ್ಲಿ ಬಹುತೇಕ ಕಾಮಗಾರಿಗಳಿಗೆ ಒಪ್ಪಿಗೆ ನೀಡಲಾಯಿತು. ಕೆಲ ಸದಸ್ಯರು ಅವರದ್ದೇ ದಾಟಿಯಲ್ಲಿ ವಿದಾಯ ಬಾಷಣ ಮಾಡಿದರು.
ವಿಜಯವಾಣಿ ವರದಿ ಪ್ರಸ್ತಾಪ
ಜುಲೈ.2ರ ವಿಜಯವಾಣಿ ದಿನಪತ್ರಿಕೆಯಲ್ಲಿ ಚಿರಶಾಂತಿ ವಾಹನ ಸಮಸ್ಯೆಗೆ ಬೇಕು ಮುಕ್ತಿ ಶೀರ್ಷಿಕೆಯಡಿ ಪ್ರಕಟವಾಗಿದ್ದ ಸುದ್ದಿ ಬಗ್ಗೆ ಪ್ರಸ್ತಾಪಿಸಿದ ಸದಸ್ಯರು, ಮೃತಪಟ್ಟವರ ಕುಟುಂಬಕ್ಕೆ ಅತ್ಯವಶ್ಯವಾಗಿರುವ ಚಿರಶಾಂತಿ ವಾಹನ ಖರೀದಿಗೆ ನಗರಸಭೆ ಮೀನಮೇಷ ಎಣಿಸುತ್ತಿದೆ. ಖಾಸಗಿ ಅವರು ಒಂದು ಶವ ಸಾಗಿಸಲು 3ರಿಂದ 4 ಸಾವಿರ ಹಣ ಪಡೆಯುತ್ತಿದ್ದಾರೆ. ಇದರ ಹಿಂದೆ ನಗರಸಭೆ ಅಧಿಕಾರಿಗಳು ಕೈಜೋಡಿಸಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದರು.