ಪ್ರವಾಹ ಪೀಡಿತ 34 ಹಳ್ಳಿಗಳಿಗೆ ಶಾಶ್ವತ ಪರಿಹಾರ ನೀಡಿ

Provide permanent relief to 34 flood affected villages
ಮುಧೋಳ ನಗರದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಬಸವಂತ ಕಾಂಬಳೆ,ದುಂಡಪ್ಪ ಯರಗಟ್ಟಿ, ನಾಗೇಶ ಗೋಲಶೆಟ್ಟಿ ಇದ್ದರು.
Published on

ಮುಧೋಳ: ಪದೇ ಪದೆ ಪ್ರವಾಹಕ್ಕೆ ಒಳಗಾಗುವ ತಾಲೂಕಿನ ಘಟಪ್ರಭಾ ನದಿಪಾತ್ರದ ಮಿರ್ಜಿ, ಢವಳೇಶ್ವರ, ಮಳಲಿ ಸೇರಿ 34 ಗ್ರಾಮಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಯಾದವಾಡ ಹಾಗೂ ಚಿಚಖಂಡಿ ಸೇತುವೆ ಮೇಲ್ದರ್ಜೆಗೆ ಏರಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರ ಸಂಘ, ಉತ್ತರ ಕರ್ನಾಟಕ ಮುಳುಗಡೆ ಮತ್ತು ನೆರೆ ಸಂತ್ರಸ್ತರ ರಕ್ಷಣಾ ಸಮಿತಿ ಕರೆ ಕೊಟ್ಟಿದ್ದ ಮುಧೋಳ ಬಂದ್‌ಗೆ ಸೋಮವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಜಿಎಲ್‌ಬಿಸಿ ಕಚೇರಿಯಿಂದ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ ಸಂಗೊಳ್ಳಿ ರಾಯಣ್ಣ, ಜಡಗಾಬಾಲ ವೃತ್ತ, ಗಡದನ್ನವರ ವತ್ತ ಮಾರ್ಗವಾಗಿ ಸಂಚರಿಸಿ ಯಾದವಾಡ ಕ್ರಾಸ್ ಬಳಿ ಸಭೆಯಾಗಿ ಮಾರ್ಪಟ್ಟಿತು.

ಕಬ್ಬು ಬೆಳಗಾರರ ಸಂಘದ ತಾಲೂಕು ಅಧ್ಯಕ್ಷ ದುಂಡಪ್ಪ ಯರಗಟ್ಟಿ ಮಾತನಾಡಿ, 2019ರಲ್ಲಿ ಮುಳುಗಡೆಯಾದ ಪ್ರದೇಶದಂತೆ ಯುಕೆಪಿ ಮಾದರಿಯಲ್ಲಿ ಪರಿಹಾರ ನೀಡಬೇಕು. ತಕ್ಷಣ ಪ್ರವಾಹಕ್ಕೀಡಾದ ಪ್ರದೇಶದ ಜನರಿಗೆ ಪರಿಹಾರ ನೀಡಬೇಕು. ನದಿ ಪಾತ್ರದ ಬೆಳೆಗಳು ಹಾಳಾಗಿವೆ. ಶಾಶ್ವತ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರು ಅವಕಾಶ ಒದಗಿಸಿಕೊಡಬೇಕು ಎಂದು ಹೇಳಿದರು.

ರಾಜ್ಯ ರೈತ ಸಂಘದ ಬಾಗಲಕೋಟೆ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ಮಾತನಾಡಿ, ಬೆಳೆ, ಮನೆ, ಜನ-ಜಾನುವಾರು ಹಾನಿಗೆ ಎನ್‌ಡಿಆರ್‌ಎ್ ಹಾಗೂ ಎಸ್‌ಡಿಆರ್‌ಎ್ ಅಡಿ ನೀಡುವ ಪರಿಹಾರ ನಿಯಮ ಬದಲಾವಣೆಯಾಗಬೇಕು. ಈಗಾಗಲೇ ರೈತ ಮುಖಂಡರು ಸಚಿವರ ಜತೆ ಸಭೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಜತೆ ಒಂದು ಸುತ್ತಿನ ಮಾತುಕತೆ ನಡೆಸಲು ಅವಕಾಶ ಮಾಡಿಕೊಡಬೇಕು. ಪ್ರವಾಹ ಪೀಡಿತ ಪ್ರದೇಶಕ್ಕೆ ಸಿಎಂ ಬರಬೇಕು ಎಂದು ಒತ್ತಾಯಿಸಿದರು.

ಮಹೇಶಗೌಡ ಪಾಟೀಲ ಮಾತನಾಡಿ, ಸರ್ಕಾರಕ್ಕೆ ಸಾಕಷ್ಟು ರೀತಿಯಲ್ಲಿ ಈ ಭಾಗದ ರೈತರಿಂದ ಲಾಭ ಇದ್ದರೂ ಈ ಭಾಗದ ರೈತರ ಗೋಳು ಕೇಳುವವರೇ ಇಲ್ಲ ಎಂದು ಹೇಳಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಸಂಗನಗೌಡ ಕಾತರಕಿ, ನಾರಾಯಣ(ರಾಜು) ಯಡಹಳ್ಳಿ, ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ನಾಗೇಶ ಗೋಲಶೆಟ್ಟಿ, ಸುಭಾಷ ಶಿರಬೂರ, ದುಂಡಪ್ಪ ಲಿಂಗರಡ್ಡಿ, ಹಣಮಂತ ಅಡವಿ, ಸದಾ ಜಾಧವ, ಈರಪ್ಪ ಹಂಚಿನಾಳ, ಶ್ರೀಶೈಲಗೌಡ ಪಾಟೀಲ, ಬಂಡು ಘಾಟಗೆ ಇತರರು ಇದ್ದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಎಸ್ಪಿ ಅಮರನಾಥರೆಡ್ಡಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ್ ವಿನೋದ ಹತ್ತಳ್ಳಿ ಅವರು ಪ್ರತಿಭಟನಾಕಾರರನ್ನು ಭೇಟಿಯಾಗಿ ಪ್ರವಾಹದ ಹಾನಿ ಬಗ್ಗೆ ಸರ್ಕಾರದ ಗಮನಕ್ಕೆ ತಂದು ತಮ್ಮ ಬೇಡಿಕೆ ಈಡೇರಿಸುವುದಾಗಿ ಮನವರಿಕೆ ಮಾಡಿದರು. ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯುವ ಕುರಿತು ರೈತರು ನಿರ್ಧಾರ ಪ್ರಕಟಿಸಿದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎನ್. ಮಾತನಾಡಿ, 34 ಗ್ರಾಮಗಳಿಗೆ ಪ್ರವಾಹ ಎದುರಾಗಿ ಸಮಸ್ಯೆಯಾಗಿರುವುದನ್ನು ಕಂದಾಯ ಇಲಾಖೆಯಿಂದ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಕೊಡಲಾಗುವುದು. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಪರಿಹಾರ ಕಾರ್ಯ ಸರ್ಕಾರದ ಮಟ್ಟದಲ್ಲಿ ನಡೆಯುತ್ತದೆ. ತಮ್ಮೆಲ್ಲರ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಆ.14 ರಂದು ಜಿಲ್ಲಾ ಉಸ್ತುವಾರಿ ಸಚಿವರ ಜತೆ ಸಭೆ ನಡೆಸಲು ರೈತ ಪ್ರತಿನಿಧಿಗಳಿಗೆ ಅವಕಾಶ ಕೊಡಲಾಗುವುದು ಎಂದು ಹೇಳಿದರು.

ಪರದಾಡಿದ ಶಾಲೆ ಕಾಲೇಜು ವಿದ್ಯಾರ್ಥಿಗಳು

ಮುಧೋಳ ಬಂದ್ ಇದ್ದರೂ ನಗರದ ಶಾಲೆ-ಕಾಲೇಜುಗಳು ಪ್ರಾರಂಭವಿದ್ದ ಕಾರಣ ಸಂಜೆ ವೇಳೆ ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮೂರಿಗೆ ಮರಳಲು ಸಾರಿಗೆ ಬಸ್‌ಗಳಿಲ್ಲದೆ ತೊಂದರೆ ಅನುಭವಿಸಿದರು. ಅಲ್ಲಲ್ಲಿ ಹೋಗುವ ದ್ವಿಚಕ್ರ ವಾಹನಗಳಿಗೆ ಕೈ ಮಾಡಿ ತಮ್ಮೂರಿಗೆ ಹೋದ ದೃಶ್ಯಗಳು ಕಂಡು ಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net