

ಗುಳೇದಗುಡ್ಡ: ಸಮಾಜದಲ್ಲಿ ಹೆಣ್ಣು ಮಗು ಎಂದು ತಾರತಮ್ಯ ಮಾಡದೆ, ಅವಳಿಗೆ ಸಮಾನ ಅವಕಾಶ ಕಲ್ಪಿಸಿದಾಗ ಆಕೆ ಏನನ್ನಾದರೂ ಸಾಧಿಸುತ್ತಾಳೆ ಎಂದು ಡಾ. ಸುರೇಖಾ ಯಂಡಿಗೇರಿ ಹೇಳಿದರು.
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, ಮಹಿಳಾ ಸಬಲೀಕರಣ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳಲ್ಲಿ ಅಗಾಧ ಶಕ್ತಿ ಅಡಗಿದ್ದು ತಾಳ್ಮೆ, ಸಹನೆ, ಪ್ರೀತಿ ಜತೆಗೆ ದೈಹಿಕ ಹಾಗೂ ಮಾನಸಿಕವಾಗಿಯೂ ಸಬಲರಾಗಿರುತ್ತಾರೆ. ಭಾರತೀಯ ಸಂಸ್ಕೃತಿ ಶ್ರೇಷ್ಠವಾಗಿದ್ದು ತಾಯಂದಿರು ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
ಮಹಿಳಾ ಸಬಲೀಕರಣ ಘಟಕ ಸಂಯೋಜಕಿ ಭುವನೇಶ್ವರಿ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಕೀರಪ್ಪ ಚನ್ನಪ್ಪಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ರೇವಣಸಿದ್ದಪ್ಪ, ಈಶ್ವರಪ್ಪ, ಪ್ರಕಾಶ, ರಮೇಶ ಹುಲ್ಲೂರ, ಬಸಯ್ಯ ಮಠಪತಿ, ಮುತ್ತಪ್ಪ ರೊಟ್ಟಿ, ಅಶೋಕ ಪೂಜಾರಿ, ವಿದ್ಯಾರ್ಥಿ ಪ್ರತಿನಿಧಿ ಮಂಜುಳಾ ಆಸಂಗಿ ಮತ್ತಿತರರಿದ್ದರು.