

ಬ್ಯಾಡಗಿ: ಭವಿಷ್ಯದ ಆರೋಗ್ಯ ದೃಷ್ಟಿಯಿಂದ ಪ್ರತಿಯೊಬ್ಬರೂ ಮಕ್ಕಳಿಗೆ ಅಗತ್ಯ ಪೌಷ್ಟಿಕ ಆಹಾರ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ವಿಶ್ವ ಪೌಷ್ಟಿಕ ಆಹಾರ ದಿನಾಚರಣೆ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ತಾಲೂಕು ಕಾನೂನು ಸೇವೆ ಸಮಿತಿ ಅಧ್ಯಕ್ಷ ಎಸ್.ಟಿ. ಸತೀಶ ಹೇಳಿದರು.
ವಿಶ್ವ ಪೌಷ್ಟಿಕ ಆಹಾರ ದಿನಾಚರಣೆ ಅಂಗವಾಗಿ ಸುವರ್ಣಸೌಧದಲ್ಲಿ ಬುಧವಾರ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಬಡತನ, ಪಾಲಕರ ನಿರ್ಲಕ್ಷ್ಯ, ಗುಣಮಟ್ಟದ ಆಹಾರ ದೊರಕದೆ ಬಹುತೇಕ ಮಕ್ಕಳು ಪೌಷ್ಟಿಕ ಆಹಾರ ಸಮಸ್ಯೆ ಎದುರಿಸಿ, ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇಂತಹ ಸಮಸ್ಯೆಗೆ ಪರಿಹಾರವಾಗಿ ಸರ್ಕಾರ ಶಿಶುಯೋಜನಾಧಿಕಾರಿಗಳ ಕಾರ್ಯಾಲಯ ವತಿಯಿಂದ ವೈದ್ಯಕೀಯ ಸೌಲಭ್ಯ ಒದಗಿಸಿ, ಉಚಿತ ಪರೀಕ್ಷೆಗೊಳಪಡಿಸಿ ಮಕ್ಕಳಲ್ಲಿರುವ ವಿವಿಧ ಪೋಷಕಾಂಶಗಳ ಕೊರತೆಯನ್ನು ಗುರ್ತಿಸಿ ಆಹಾರ ಒದಗಿಸುವ ವ್ಯವಸ್ಥೆಯಿದೆ. ಆರೋಗ್ಯ ಸಮಸ್ಯೆಗಳಿಗೆ ಗುಣಮಟ್ಟದ ಆಹಾರ ಸೇವನೆ ಮುಖ್ಯವಾಗಿದೆ. ಇದಕ್ಕಾಗಿ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ತಿಳಿವಳಿಕೆ ನೀಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲ ಬಸಯ್ಯ ಹಿರೇಮಠ ವಹಿಸಿದ್ದರು. ಕಿರಿಯ ನ್ಯಾಯಾಧೀಶ ಸುರೇಶ ವಗ್ಗನವರ, ಸಿಡಿಪಿಒ ವೈ.ಟಿ. ಪೂಜಾರ, ಸರ್ಕಾರಿ ಅಭಿಯೋಜಕ ಕೆ.ಆರ್. ಲಮಾಣಿ, ತಾಪಂ ವ್ಯವಸ್ಥಾಪಕ ಪ್ರಕಾಶ ಹಿರೇಮಠ, ವಕೀಲ ಎಂ.ಪಿ. ಹಂಜಗಿ, ಮೃತ್ಯುಂಜಯ ಕಾಯಕದ, ಭಾರತೀ ಕುಲಕರ್ಣಿ, ಎಸ್.ಎಚ್.ಗುಂಡಪ್ಪನವರ, ಎಸ್.ಎಚ್.ಕಾಟೇನಹಳ್ಳಿ, ಎಸ್.ಎಸ್.ಕೊಣ್ಣೂರು ಇತರರಿದ್ದರು.