

ಚಿಕ್ಕಮಗಳೂರು: ಮಕ್ಕಳ ಸರ್ವಾಂಗೀಣ ಬೆಳವಣಿಗೆ ಮತ್ತು ಆರೋಗ್ಯಕ್ಕಾಗಿ ಪಾಲಕರು ಅವರಿಗೆ ಪೌಷ್ಟಿಕಾಂಶಯುಕ್ತ ಆಹಾರಗಳನ್ನೇ ನೀಡಬೇಕು ಎಂದು ಮಕ್ಕಳ ತಜ್ಞ ಡಾ. ಶಿವಮೂರ್ತಿ ಸಲಹೆ ನೀಡಿದರು.
ನಗರದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ 'ಪೌಷ್ಟಿಕಾಂಶ ದಿನ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೌಷ್ಟಿಕಾಂಶಯುಕ್ತ ಆಹಾರಗಳು ಮನುಷ್ಯನ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ನಿರೋಗಿಯಾಗಬಹುದು. ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಬಹುದು ಎಂದು ಕಿವಿಮಾತು ಹೇಳಿದರು.
ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ಧಾನ್ಯಗಳು, ಹಣ್ಣು, ತರಕಾರಿಗಳು ಅತ್ಯಗತ್ಯ. ಅವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶವಿರುತ್ತದೆ. ಹಾಗಾಗಿ ಅವುಗಳನ್ನು ಸೇವಿಸಿದರೆ ಮಕ್ಕಳು ಸದೃಢರಾಗುತ್ತಾರೆ ಎಂದು ತಿಳಿಸಿದರು.
ಖಾಸಗಿ ಶಾಲೆಯಲ್ಲಿ ಪೌಷ್ಟಿಕಾಂಶ ದಿನವನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಎಲ್ಲಾ ಶಾಲೆಗಳಲ್ಲೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಜೀವಿನಿ ವಿದ್ಯಾಸಂಸ್ಥೆ ಅಧ್ಯಕ್ಷೆ ಎಸ್.ಶಾಂತಕುಮಾರಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ತಮ್ಮ ಶಾಲೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಮಕ್ಕಳು ನಿರೋಗಿಗಳಾಗಿ ಬಾಳಬೇಕಾದರೆ ಅವರಿಗೆ ಕಡ್ಡಾಯವಾಗಿ ಪೌಷ್ಟಿಕಾಂಶಯುಕ್ತ ಆಹಾರಗಳನ್ನೇ ನೀಡಬೇಕು ಎಂದು ಪಾಲಕರಲ್ಲಿ ಮನವಿ ಮಾಡಿದರು.
ಇದೇ ವೇಳೆ ಸಂಸ್ಥೆಯಲ್ಲಿ ಪೌಷ್ಟಿಕಾಂಶಯುಕ್ತ ಆಹಾರಗಳ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ವಿದ್ಯಾರ್ಥಿಗಳು ಹಾಗೂ ಪಾಲಕರಿಂದ ನಡೆಯಿತು. ಪ್ರಾಚಾರ್ಯೆ ಎಚ್.ಆರ್.ಹೇಮಾ, ಶಿಕ್ಷಕಿಯರಾದ ಸವಿತಾ, ವರ್ಷಾ, ಹೀರಾ ಉಪಸ್ಥಿತರಿದ್ದರು.