ಸಫಾಯಿ ಕರ್ಮಚಾರಿಗಳಿಗೆ ಅಗತ್ಯ ಸೌಲಭ್ಯ ಒದಗಿಸಿ

New Rail New
Published on

ಹುಬ್ಬಳ್ಳಿ : ಸಫಾಯಿ ಕರ್ಮಚಾರಿಗಳಿಗೆ ಕರ್ತವ್ಯದ ಸಂದರ್ಭದಲ್ಲಿ ರಕ್ಷಣಾತ್ಮಕ ಸಾಧಕನಗಳನ್ನು ಒದಗಿಸುವ ಜತೆಗೆ ಅವರಿಗೆ ಅತ್ಯುತ್ತಮ ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸಬೇಕು. ನಿಯಮಿತವಾಗಿ ಅವರ ಆರೋಗ್ಯ ತಪಾಸಣೆ ನಡೆಸಬೇಕು ಎಂದು ರಾಷ್ಟ್ರಿಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ವೆಂಕಟೇಶ್ವರನ್ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ನೈಋತ್ಯ ರೈಲ್ವೆ ಪ್ರಧಾನ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳ ಕಲ್ಯಾಣ ಮತ್ತು ಸಮಸ್ಯೆಗಳ ಕುರಿತು ರ್ಚಚಿಸಲು ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ತನ್ನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಫಾಯಿ ಕರ್ಮಚಾರಿಗಳಿಗೆ ಸಾಮಾಜಿಕ ಹಾಗೂ ಸೇವಾ ಭದ್ರತೆ ಒದಗಿಸುವುದು ನೈಋತ್ಯ ರೈಲ್ವೆಯ ಜವಾಬ್ದಾರಿ. ಕರ್ತವ್ಯದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಮಳೆಗಾಲದ ಈ ದಿನಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಬೂಟುಗಳು, ಜಾಕೆಟ್​ಗಳಂತ ಸೌಲಭ್ಯಗಳನ್ನು ಒದಗಿಸಬೇಕು ಎಂದ ಅವರು, ‘ಶ್ರಮಿಕ ಕಲ್ಯಾಣ ಪೋರ್ಟಲ್’ನಲ್ಲಿ ನಿರ್ವಹಿಸುತ್ತಿರುವ ಗುತ್ತಿಗೆ ಸಿಬ್ಬಂದಿಯ ವಿವರವನ್ನು ಪರಿಶೀಲಿಸಿದರು. ಈ ವಿವರಗಳನ್ನು ಕಾಲಕಾಲಕ್ಕೆ ಅಪ್​ಡೇಟ್ ಮಾಡುವುದು ಕಡ್ಡಾಯ. ಇಲ್ಲದಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಫಾಯಿ ಕರ್ಮಚಾರಿಗಳಿಗೆ ಸಕಾಲದಲ್ಲಿ ವೇತನ ಪಾವತಿ, ವೇತನ ಶ್ರೇಣಿಗಳ ಪರಿಷ್ಕರಣೆ ಮತ್ತು ವೈದ್ಯಕೀಯ ವಿಮೆ, ರಜೆ, ಬೋನಸ್​ನಂತಹ ಹೆಚ್ಚುವರಿ ಸೌಲಭ್ಯಗಳ ಕುರಿತಾಗಿ ನಿಯಮಿತವಾಗಿ ರೈಲ್ವೆ ಅಧಿಕಾರಿಗಳು ಪರಿಶೀಲಿಸಿ, ಕ್ರಮ ಕೖಗೊಳ್ಳಬೇಕು ಎಂದು ಸೂಚನೆ ನೀಡಿದರು.

ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಅರವಿಂದ ಶ್ರೀವಾಸ್ತವ ಮಾತನಾಡಿ, ಆಯೋಗ ಸೂಚಿಸಿದ ಸಲಹೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವುದಾಗಿ ತಿಳಿಸಿದರು. .

ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಜೈನ್, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹರ್ಷ ಖರೆ, ರೈಲ್ವೆಯ ಹಿರಿಯ ಅಧಿಕಾರಿಗಳು, ಸಫಾಯಿಯಿ ಕರ್ಮಚಾರಿಗಳ ಒಕ್ಕೂಟದ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net