ಸಿಎಚ್‌ಸಿಗೆ ಅಗತ್ಯ ಸೌಲಭ್ಯ ಒದಗಿಸಿ

arkera protst
ಅರಕೇರಾದಲ್ಲಿ ಟಿಎಚ್‌ಒ ಡಾ.ಬನದೇಶ್ವರಗೆ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು. ದೇವದುರ್ಗ ತಾಲೂಕು ಅಧ್ಯಕ್ಷ ಮರಿಲಿಂಗಪಾಟೀಲ್, ಅರಕೇರಾ ತಾಲೂಕು ಅಧ್ಯಕ್ಷ ಹರ್ಷವರ್ಧನ ನಾಯಕ ದೊರೆ, ಪದಾಧಿಕಾರಿಗಳಾದ ಬಸವರಾಜ ಸ್ವಾಮಿ, ರಮೇಶ ನಾಯಕ, ಶ್ರೀಕಾಂತ ನಾಯಕ ಜಲ್ಲೆ, ಹನುಮಗೌಡ, ಶಿವಪ್ಪ ದೊರೆ ಇತರರಿದ್ದರು.
Published on

ಅರಕೇರಾ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಗತ್ಯ ವೈದ್ಯರು, ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಸೋಮವಾರ ಟಿಎಚ್‌ಒ ಡಾ.ಬನದೇಶ್ವರಗೆ ಮನವಿ ಸಲ್ಲಿಸಿತು.

ಸಂಘದ ದೇವದುರ್ಗ ತಾಲೂಕು ಅಧ್ಯಕ್ಷ ಮರಿಲಿಂಗ ಪಾಟೀಲ್ ಮಾತನಾಡಿ, ಆರೋಗ್ಯ ಕೇಂದ್ರದಲ್ಲಿ ವೈದ್ಯರ ಆಗಮನ ಮತ್ತು ನಿರ್ಗಮನ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. 60ಕ್ಕೂ ಹೆಚ್ಚು ಹಳ್ಳಿ, ದೊಡ್ಡಿ, ತಾಂಡಾಗಳು ಒಳಪಡುತ್ತವೆ. ಅಲ್ಲದೆ ನೂತನ ತಾಲೂಕು ಕೇಂದ್ರವಾಗಿರುವುದರಿಂದ ತಾಲೂಕಿಗೆ ಸೇರ್ಪಡೆಯಾದ ಅನೇಕ ಗ್ರಾಮಸ್ಥರು ಇದೇ ಆರೋಗ್ಯ ಕೇಂದ್ರ ಅವಲಂಬಿಸಿದ್ದಾರೆ.

ಮಂಜೂರಾದ ಒಟ್ಟು ವೈದ್ಯಕೀಯ ಹುದ್ದೆಗಳ ಹೊರತುಪಡಿಸಿ ಗುತ್ತಿಗೆ, ಕಾಯಂ ಸೇರಿ 50ಕ್ಕೂ ಹೆಚ್ಚು ಜನ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ವೈದ್ಯಕೀಯ ಸೇವೆಗಳು ಮಾತ್ರ ಸಮರ್ಪಕವಾಗಿಲ್ಲ ಎಂದು ದೂರಿದರು.

ಸಂಘದ ಅರಕೇರಾ ತಾಲೂಕು ಅಧ್ಯಕ್ಷ ಹರ್ಷವರ್ಧನ ನಾಯಕ ದೊರೆ ಮಾತನಾಡಿ, ಸಿಎಚ್‌ಸಿಗೆ ಮಂಜೂರಾದ ಆಡಳಿತ ವೈದ್ಯಾಧಿಕಾರಿ, ಸ್ತ್ರೀರೋಗ ತಜ್ಞೆ, ದಂತ ವೈದ್ಯ, ಮಕ್ಕಳ ತಜ್ಞ, ಅರಿವಳಿಕೆ ತಜ್ಞ ಸೇರಿ ಆಯುಷ್ ಹುದ್ದೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಿ, ಸಮರ್ಪಕ ಸೇವೆ ಒದಗಿಸಬೇಕು. ಸರ್ಕಾರದಿಂದ ನೇಮಕಗೊಂಡವರು ಮತ್ತು ಪ್ರಭಾರ ಜವಾಬ್ದಾರಿ ಹೊತ್ತವರು ಆಸ್ಪತ್ರೆಗೆ ಸರಿಯಾಗಿ ಬರುತ್ತಿಲ್ಲ. ಅಲ್ಲದೇ ಡಿ-ಗ್ರೂಪ್ ನೌಕರರೇ ಚಿಕಿತ್ಸೆ ನೀಡಿ ಔಷಧ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಆಸ್ಪತ್ರೆ ಸುಪರ್ದಿಯಲ್ಲಿರುವ ನಾಲ್ಕು ಆಂಬುಲೆನ್ಸ್‌ಗಳು ಸಮರ್ಪಕವಾಗಿ ಬಳಸಬೇಕು.ಆಸ್ಪತ್ರೆ ಒಳಾಂಗಣ ಮತ್ತು ಹೊರಾಂಗಣದಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಕುಡಿವ ನೀರು, ಸ್ವಚ್ಛತೆ, ಶೌಚಗೃಹ, ಬೆಡ್‌ಶೀಟ್, ಸೊಳ್ಳೆ ಪರದೆ ಸೇರಿ ಇತರ ಸೌಲಭ್ಯಗಳನ್ನು ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಬೀಗ ಹಾಕಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಮುಖರಾದ ಬಸವರಾಜ ಸ್ವಾಮಿ, ರಮೇಶ ನಾಯಕ, ಶ್ರೀಕಾಂತ ನಾಯಕ ಜಲ್ಲೆ, ಹನುಮಗೌಡ, ಶಿವಪ್ಪ ದೊರೆ, ವೆಂಕೋಬ ಖಾನಾಪುರ, ಯಲ್ಲನಗೌಡ ಕೆ, ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net