ನಿರಾಶ್ರಿತರ ಕೇಂದ್ರದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ; ಜಿಲ್ಲಾಧಿಕಾರಿ ಟಿ.ಭೂಬಾಲನ್

DC MEETING NIRASHRITA KENDRA
ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಭೆ ನಡೆಸಿದರು. ಎಸ್‌ಪಿ ಶಂಕರ ಮಾರಿಹಾಳ, ವಿಜಯಕುಮಾರ ಆಜೂರ, ಕೆ.ಕೆ. ಚವಾಣ್, ಸಂಪತ್‌ಕುಮಾರ ಗುಣಾರಿ ಮತ್ತಿತರರಿದ್ದಾರೆ.
Published on

ವಿಜಯಪುರ: ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975ರ ಸೆಕ್ಷನ್ 5ರ ಪ್ರಕಾರ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮದಂತೆ ಭಿಕ್ಷಾಟನೆ ಮಾಡುತ್ತಿರುವವರನ್ನು ರಕ್ಷಿಸಿ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗುತ್ತದೆ. ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳು ಒಳಗೊಂಡಂತೆ ನಗರದಲ್ಲಿ ಪರಿಹಾರ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಈ ಕೇಂದ್ರದಲ್ಲಿ 150 ನಿರಾಶ್ರಿತರಿಗೆ ಆಶ್ರಯ ಒದಗಿಸಲಾಗಿದ್ದು, ಈ ಪೈಕಿ 91 ಬೇರೆ ರಾಜ್ಯದವರಾಗಿದ್ದಾರೆ. ಆಶ್ರಯ ಪಡೆದವರಲ್ಲಿ 45 ಜನ ಮಾನಸಿಕ ಅಸ್ವಸ್ಥರಿದ್ದು, ಕೆಲವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕಾಲಕಾಲಕ್ಕೆ ಕೌನ್ಸೆಲಿಂಗ್ ನಡೆಸಬೇಕು. ಕಾಲಕಾಲಕ್ಕೆ ಸಮಾಲೋಚನೆ ನಡೆಸಬೇಕು. ಆರೋಗ್ಯ ತಪಾಸಣೆ ನಡೆಸಬೇಕು. ದೀರ್ಘಾವಧಿ ಕಾಯಿಲೆ ಇರುವವರಿಗೆ ಸೂಕ್ತ ಔಷಧೋಪಚಾರ ಒದಗಿಸಿ ಗುಣಪಡಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಕೇಂದ್ರದಲ್ಲಿನ ನಿರಾಶ್ರಿತರಿಗೆ ಟೇಲರಿಂಗ್, ಲಾಂಡ್ರಿ ಸೇರಿದಂತೆ ಅವರ ಕೌಶಲಕ್ಕೆ ಅನುಸಾರವಾಗಿ ಸೂಕ್ತ ತರಬೇತಿ ಒದಗಿಸಲು ಕ್ರಮ ವಹಿಸಬೇಕು. ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಬೀದಿ ದೀಪಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಕೇಂದ್ರದ ಆವರಣದಲ್ಲಿ ಉತ್ತಮವಾದ ಸ್ವಚ್ಛ ಪರಿಸರಕ್ಕೆ ಆದ್ಯತೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಎಎಸ್‌ಪಿ ಶಂಕರ ಮಾರಿಹಾಳ, ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಕೆ. ಚವಾಣ್, ಡಿಎಚ್‌ಒ ಸಂಪತ್‌ಕುಮಾರ ಗುಣಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಲ್. ರೂಪಾ, ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಬಸವರಾಜ ನಾಟೀಕಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net