

ನುಗ್ಗೇಹಳ್ಳಿ: ಸ್ವ ಸಹಾಯ ಸಂಘಗಳ ಮಹಿಳೆಯರಿಗೆ ಕರಕುಶಲ ಕೆಲಸಗಳು ಟೈಲರಿಂಗ್ ಹಾಗೂ ಅಡಕೆ ತಟ್ಟೆಗಳ ತಯಾರಿಕೆ ತರಬೇತಿ ಜತೆ ಹೆಚ್ಚಿನ ಅನುದಾನ ನೀಡಿದರೆ ಆರ್ಥಿಕವಾಗಿ ಗ್ರಾಮೀಣ ಭಾಗದ ಮಹಿಳೆಯರು ಅಭಿವೃದ್ಧಿ ಹೊಂದುತ್ತಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮರಾಜು ಸೋಮವಾರ ತಿಳಿಸಿದರು.
ತಗಡೂರು ಹಾಸ್ಟೆಲ್ ಸಮುದಾಯ ಭವನದಲ್ಲಿ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಬಲವರ್ಧನ ಸಂಸ್ಥೆ, ರಂಗನಾಥ ಸ್ವಾಮಿ ಸಂಜೀವಿನಿ ಮಹಿಳಾ ಒಕ್ಕೂಟ ಸೋಮವಾರ ಆಯೋಜಿಸಿದ್ದ 6ನೇ ವರ್ಷದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ವರ್ಗಗಳು ಹೆಚ್ಚು ಇರುವ ತಗಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀಶಕ್ತಿ ಹಾಗೂ ಸ್ವಸಹಾಯ ಸಂಘದ ಸದಸ್ಯರುಗಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ತರಬೇತಿ ಶಿಬಿರಗಳನ್ನು ಆಯೋಜಿಸಬೇಕು. ಈ ಭಾಗದ ಮಹಿಳಾ ಸದಸ್ಯರು ಸ್ವಾವಲಂಬಿಗಳಾಗಲು ಗ್ರಾಮ ಪಂಚಾಯಿತಿಯಿಂದ ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು.
ರಂಗನಾಥ ಸ್ವಾಮಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೋಭಾ ಭಾರತೀಶ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಬ್ಸಿಡಿ ಸಾಲ ಸೌಲಭ್ಯಗಳನ್ನು ನೀಡುತ್ತಿವೆ. ಗ್ರಾಮ ಪಂಚಾಯಿತಿ ಮೂಲಕ ಇನ್ನಿತರ ಸೌಲಭ್ಯಗಳನ್ನು ಸ್ವಸಹಾಯ ಸಂಘದ ಸದಸ್ಯರುಗಳಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ. ಗ್ರಾಮ ಪಂಚಾಯಿತಿಯಿಂದ ರಂಗನಾಥ ಸ್ವಾಮಿ ಮಹಿಳಾ ಒಕ್ಕೂಟದ ಕಚೇರಿ ತೆರೆಯಲು ಕೊಠಡಿ ಕೊಡಿಸಬೇಕು ಎಂದು ಅಧ್ಯಕ್ಷರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ನೋಡಲ್ ಅಧಿಕಾರಿ ಪುಣ್ಯಾ, ತಾಲೂಕು ವ್ಯವಸ್ಥಾಪಕ ಪ್ರವೀಣ್, ಒಕ್ಕೂಟದ ಕಾರ್ಯದರ್ಶಿ ಕುಮಾರಿ, ಖಜಾಂಚಿ ರೂಪಾ, ಎಂಬಿಕೆ ಭುವನಹಳ್ಳಿ ತನುಜಾ ಮಧು, ಪಾರ್ವತಿ, ಶ್ರೀಶಕ್ತಿ ಸ್ವಸಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಸದಸ್ಯರುಗಳು ಇತರರು ಹಾಜರಿದ್ದರು.