

ಮಡಿಕೇರಿ: ಸಹಕಾರ ಕ್ಷೇತ್ರದಲ್ಲಿ ಸಹಕಾರಿಗಳಿಗಾಗಿ ಹಲವು ಸೌಲಭ್ಯಗಳನ್ನು ಕಲ್ಪಿಸುವುದು ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿಕರಿಗೆ ವಿವಿಧ ಸವಲತ್ತುಗಳನ್ನು ತಲುಪಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಎ.ಮಂಜು ತಿಳಿಸಿದರು.
ನಗರದ ಬಾಲಭಾವನದಲ್ಲಿ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಸಹಕಾರ ಸಂಸ್ಥೆಗಳನ್ನು ಡಿಜಿಟಲೀಕರಣಗೊಳಿಸಲು ತಾಂತ್ರಿಕತೆಯ ಅಳವಡಿಕೆ ಉನ್ನತೀಕರಣ ದಿನಾಚರಣೆ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ಅವರು ಮಾತನಾಡಿದರು.
ಸಹಕಾರ ಕ್ಷೇತ್ರವು ವಿಶಾಲ ವ್ಯಾಪ್ತಿ ಹೊಂದಿದೆ. ಕೊನೆಯಿಲ್ಲದ ಸೇವೆ ಎಂದರೆ ಜನ ಸೇವೆ. ಕಷ್ಟಕಾಲಕ್ಕೆ ರೈತರಿಗೆ ನೆರವಾಗುವುದು ಎಂದರೆ ಅದು ಸಹಕಾರ ಸಂಘ ಬ್ಯಾಂಕುಗಳು ಎಂದು ತಿಳಿಸಿದರು.
ರಾಜಕೀಯದಿಂದಾಗಿ ಇಂದು ಸಹಕಾರಿ ಕ್ಷೇತ್ರ ಹಾಳಾಗಿದೆ. ಸಹಕಾರಿ ಯೂನಿಯನ್‌ಗಳು ಸಮೃದ್ಧವಾಗಬೇಕಾದರೆ ರಾಜಕೀಯತ್ವ ನಡೆಯಬಾರದು. ಆಗಲೇ ಸಹಕಾರಿ ಸಂಘ ಹಾಗೂ ಬ್ಯಾಂಕುಗಳು ಉನ್ನತಿ ಕಾಣಲು ಸಾಧ್ಯ. ಹಾಗೆಯೇ ರೈತಾಪಿ ವರ್ಗದ ಜೀವನವೇ ಅತ್ಯಂತ ಶ್ರೀಮಂತ ಜೀವನ. ರೈತರಿಂದಲೇ ಆರ್ಥಿಕತೆ ಸಮೃದ್ಧವಾಗಿರುವುದು ಎಂದು ವಿವರಿಸಿದರು.
ನಮಗೆ ಉಚಿತ ಸೌಲಭ್ಯಗಳು ಬೇಕಾಗಿಲ್ಲ. ಮುಖ್ಯವಾಗಿ ವಿದ್ಯುತ್ ಹಾಗೂ ನೀರಿನ ಸೌಕರ್ಯ ನಮಗೆ ಬೇಕಾಗಿದೆ. ಆದರೆ, ಸರ್ಕಾರ ಸಾಲಮನ್ನ ಮಾಡುತ್ತೇವೆ ಎಂದು ಹೇಳಿ ಇಂದು ಕೆಲವು ಸಹಕಾರ ಕ್ಷೇತ್ರಗಳು ಸಾಲಗಳಲ್ಲಿ ಮುಳುಗುತ್ತಿದೆ. ರೈತಾಪಿ ವರ್ಗದವರಿಗೆ ನೆಮ್ಮದಿ ಸಿಗುವುದು ಸಹಕಾರ ಕ್ಷೇತ್ರದಲ್ಲಿ ಮಾತ್ರ ಎಂದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ ಮಾತನಾಡಿ, ಭಾರತದ ಆರ್ಥಿಕತೆಯನ್ನು ಮೂರನೇ ಸ್ಥಾನಕ್ಕೆ ತಲುಪಿಸಲು ಸಹಕಾರ ಸಂಸ್ಥೆಗಳಿಂದಲೇ ಸಾಧ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸಹಕಾರಿ ಸಂಸ್ಥೆಗಳನ್ನು ಸದೃಢವಾಗಿಸಬೇಕು. ಆ ನಿಟ್ಟಿನಲ್ಲಿ ದೇಶದಾದ್ಯಂತ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತದೆ ಎಂದರು.
ಕೊಡಗು ಹಾಗೂ ದಕ್ಷಿಣ ಕನ್ನಡದ ಸಹಕಾರ ಸಂಸ್ಥೆಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ರಾಜ್ಯದಲ್ಲಿ ವಿಭಾಗ ಮಟ್ಟದಲ್ಲಿ ಸಹಕಾರ ರತ್ನ ನೀಡುವ ಸಂದರ್ಭ ತಾರತಮ್ಯ ಎಸಗಲಾಗುತ್ತಿದೆ. ಆರಂಭದಲ್ಲಿ ೮ ಜನರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೆ ಇಂದು ರಾಜಕೀಯ ಪ್ರೇರಿತವಾಗಿ ೧೩೦ಕ್ಕೂ ಹೆಚ್ಚಿನ ಜನರಿಗೆ ಸಹಕಾರ ರತ್ನ ನೀಡುವ ಮೂಲಕ ಸಹಕಾರ ರತ್ನಕ್ಕೆ ಕಳಂಕ ತರುವ ಕೆಲಸ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಲ ನಿಯಮಿತದ ನಿರ್ದೇಶಕ ಎಂ.ಬಿ.ದೇವಯ್ಯ ಮಾತನಾಡಿ, ಸಹಕಾರ ಸಂಘದಿಂದ ಸಾಲ ಸೌಲಭ್ಯ ಪಡೆದ ಎಷ್ಟೋ ಬಡ ಜನರು ಬದುಕು ಕಟ್ಟಿಕೊಂಡಿದ್ದಾರೆ. ಸಹಕಾರ ಕೇತ್ರದ ಬೆಳವಣಿಗೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.
ಕೊಡಗಿನ ಜನರು ಭೂಮಿ ಮಾರಿಕೊಳ್ಳಬಾರದು. ಕೃಷಿಕರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿದ್ದರೆ ಜಾಗದ ಮಾರಾಟ ಹೆಚ್ಚಾಗುತ್ತದೆ. ಇದನ್ನು ಕೂಡ ಗಮನದಲ್ಲಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದರು.
ಪತ್ರಕರ್ತ ಜಿ.ರಾಜೇಂದ್ರ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕಾಫಿ, ಕರಿಮೆಣಸು, ಜೇನು, ಕಿತ್ತಳೆ ಹೀಗೆ ಹಲವಾರು ಕೃಷಿಯಲ್ಲಿ ಪ್ರಸಿದ್ಧಿ ಪಡೆದಿದ್ದು, ಸಹಕಾರಿ ಬ್ಯಾಂಕ್‌ಗಳಿಂದ ಸಾಲ ವ್ಯವಸ್ಥೆಯು ರೈತರನ್ನು ಉಳಿಸಿದೆ. ಆ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರಗಳನ್ನು ಉಳಿಸಿದರೆ ರೈತರನ್ನು ಬೆಳೆಗಾರರನ್ನು ಉಳಿಸಿದಂತೆ ಎಂದರು.
ಕೆಐಸಿಎಂ ಕಾಲೇಜಿನ ಪ್ರಾಂಶುಪಾಲೆ ಆರ್.ಎಸ್.ರೇಣುಕಾ ಮಾತನಾಡಿ, ಒಂದು ಗ್ರಾಮದ ಅಭಿವೃದ್ಧಿ ಆಗಬೇಕೆಂದರೆ ಗ್ರಾಮದಲ್ಲಿ ಒಂದು ಶಾಲೆ, ಒಂದು ಸಹಕಾರ ಸಂಘ, ಒಂದು ಬ್ಯಾಂಕ್ ಅವಶ್ಯಕತೆ ಇದೆ. ಅದೇ ರೀತಿ ಸಹಕಾರಿ ಸಂಘಗಳು ಸಾಲ ಸೌಲಭ್ಯವಲ್ಲದೆ ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕೊಳಕೇರಿಯ ಬಿದ್ದಾಟಂಡ ರಮೇಶ್ ಚಂಗಪ್ಪರವರಿಗೆ ಕೊಡಗು ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಡಿಕೇರಿಯ ಕೊಂಗಂಡ ಎ.ತಿಮ್ಮಯ್ಯ, ಪೊನ್ನಂಪೇಟೆಯ ಚಿರಿಯಪಂಡ ಉತ್ತಪ್ಪ, ಸೋಮವಾರಪೇಟೆಯ ಎಚ್.ಎಸ್.ಸುಬ್ಬಪ್ಪರವರಿಗೆ ಶ್ರೇಷ್ಠ ಸಹಕಾರಿ ಪ್ರಶಸ್ತಿ ಹಾಗೂ ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿಯನ್ನು ಮಡಿಕೇರಿಯ ಮಣವಟ್ಟಿರ ಕಾವೇರಿಯಮ್ಮ ಪೂವಣ್ಣರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಮನು ರಾಮಚಂದ್ರ, ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ರವಿಬಸಪ್ಪ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಕೆ.ಎ.ಸಂಪತ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕ ಬಿ.ಡಿ.ಮಂಜುನಾಥ್, ಸಹಕಾರ ಸಂಘಗಳ ಉಪನಿಬಂಧಕ ಎಂ.ಎಸ್.ಕೃಷ್ಣಪ್ರಸಾದ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರು, ಮತ್ತಿತರರು ಇದ್ದರು.