

ಹಾನಗಲ್ಲ: ಸ್ವಸಹಾಯ ಸಂಘಗಳನ್ನು ರಚಿಸಿ ಕಡಿಮೆ ಬಡ್ಡಿ ದರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲು ವ್ಯವಸಾಯ ಸೇವಾ ಸಹಕಾರಿ ಸಂಘಗಳು ಗಮನ ಹರಿಸಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕಿನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕುಗಳ ಸಿಇಒ ಹಾಗೂ ಕೆಸಿಸಿ ಬ್ಯಾಂಕಿನ ಅಕಾರಿಗಳೊಂದಿಗೆ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಹೊಸ ಹೊಸ ಸೇವೆ ನೀಡಲು ಮುಂದಾಗಬೇಕು. ಈ ವರ್ಷ ಪ್ರಾಯೋಗಿಕವಾಗಿ ಬೀದಿ ಬದಿ ವ್ಯಾಪಾರಿಗಳ ಸ್ವಸಹಾಯ ಸಂಘ ರಚಿಸಿ, ಕನಿಷ್ಠ 5 ಸಂಘಗಳಿಗೆ ಸಾಲ ಸೌಲಭ್ಯ ಕಲ್ಪಿಸಿ. ಇದರಿಂದ ಖಾಸಗಿ ಲೇವಾದೇವಿದಾರರಿಂದಾಗುವ ಶೋಷಣೆ ತಪ್ಪಿಸಿದಂತಾಗಲಿದೆ. ಅಕ್ಕಿಆಲೂರು, ಬಮ್ಮನಹಳ್ಳಿ, ತಿಳವಳ್ಳಿ, ಆಡೂರು, ನರೇಗಲ್, ಬೆಳಗಾಲಪೇಟೆ, ಚಿಕ್ಕಾಂಶಿ ಹೊಸೂರು ಸೇರಿದಂತೆ ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ದೊರಕುವಂತಾಗಬೇಕು ಎಂದು ಸೂಚಿಸಿದರು.
ರೈತ ಸಮೂಹದ ನೆರವಿಗೆ ಯೋಜನೆಗಳನ್ನು ರೂಪಿಸಿ. ಪಂಪ್‌ಸೆಟ್ ಅಳವಡಿಕೆ, ಕುರಿ ಸಾಕಣೆ, ಹೈನುಗಾರಿಕೆಗೆ ಮುಂದಾಗುವ ರೈತರಿಗೆ ಸಾಲ ಸೌಲಭ್ಯ ನೀಡುವ ಅಗತ್ಯವಿದೆ. ಸಹಕಾರ ಸಂಘಗಳು ಪಡಿತರ ಕೇಂದ್ರಗಳನ್ನು ತೆರೆಯಲು ಆಸಕ್ತಿ ವಹಿಸಿದರೆ ಆದ್ಯತೆ ನೀಡುವಂತೆ ತಹಸೀಲ್ದಾರ್ ರವಿಕುಮಾರ ಕೊರವರ ಅವರಿಗೆ ಸೂಚಿಸಿದರು.
ಕೆಸಿಸಿ ಬ್ಯಾಂಕ್ ವಲಯ ಹಿರಿಯ ನಿರೀಕ್ಷಕ ಬಿ.ಎಚ್. ಶಿವಣ್ಣನವರ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಪುಷ್ಪಾವತಿ, ಸಹಕಾರ ಅಭಿವೃದ್ಧಿ ಅಕಾರಿ ಪುಷ್ಪಾವತಿ ಸೇರಿದಂತೆ ತಾಲೂಕಿನ ಎಲ್ಲ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಸಿಇಒಗಳು ಉಪಸ್ಥಿತರಿದ್ದರು.