ಹಮಾಲಿಗಳಿಗೆ ಜೀವನ ಭದ್ರತೆ ಒದಗಿಸಿ

chn sep 30 aituc (2)
Published on

ಚನ್ನಗಿರಿ: ಪ್ರತಿದಿನ ದುಡಿದರೆ ಮಾತ್ರ ಹೊಟ್ಟೆಗೆ ಹಿಟ್ಟು, ಇಲ್ಲದಿದ್ದರೆ ಉಪವಾಸವೇ ಗತಿ ಎಂಬ ಸ್ಥಿತಿಯಲ್ಲಿ ಹಮಾಲರು ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಅವರು ಸಂಘಟಿತರಾದರೆ ಮಾತ್ರ ಸರ್ಕಾರ ತಮ್ಮ ಕಡೆಗೆ ನೋಡಲು ಸಾಧ್ಯ ಎಂದು ಜಿಲ್ಲಾ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಜಿ.ಉಮೇಶ್ ತಿಳಿಸಿದರು.
ಪಟ್ಟಣದ ಎಪಿಎಂಸಿ ಅವರಣದಲ್ಲಿ ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರ ಒಕ್ಕೂಟ ಹಾಗೂ ಕರ್ನಾಟಕ ಶ್ರಮಿಕ ಶಕ್ತಿ ಅಂಗ ಸಂಘಟನೆ ಸಹಯೋಗದಲ್ಲಿ ಲೋಡಿಂಗ್ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ತಾಲೂಕು ಹಮಾಲಿ ಕಾರ್ಮಿಕರ ಮೊದಲ ಸಮ್ಮೇಳನ ಉದ್ಘಾಟಿಸಿ ಶನಿವಾರ ಮಾತನಾಡಿದರು.
ನಮ್ಮ ಮತಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಸರ್ಕಾರ ಪ್ರತಿ ತಿಂಗಳು ಕೈತುಂಬ ವೇತನ ನೀಡಿ ಎಲ್ಲ ಸೌಕರ್ಯಗಳನ್ನೂ ಒದಗಿಸುತ್ತದೆ. ಆದರೆ, ರಸ್ತೆ, ಬಸ್‌ನಿಲ್ಧಾಣ ಸೇರಿದಂತೆ ಹಲವು ಕಡೆಗಳಲ್ಲಿ ಕೆಲಸ ಮಾಡುವಂತಹ ಹಮಾಲಿಗಳಿಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ಸರ್ಕಾರ ಇರುವಂಥವರ ಕಡೆಗೆ ನೋಡುತ್ತದೆ ಬಡವರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಕೂಲಿ ಕೆಲಸ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವಂತಹ ಹಮಾಲಿಗಳ ಕಷ್ಟವನ್ನು ಅರಿಯದೆ ಜನಪ್ರತಿನಿಧಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು.
ಹಮಾಲಿ ಕೆಲಸ ಮಾಡುವಂತವರು ಬಹುತೇಕ ಅನಕ್ಷರಸ್ಥರು. ಅವರಿಗೆ ಸರ್ಕಾರದ ಯಾವುದೇ ಯೋಜನೆಗಳ ಮಾಹಿತಿ ಇರುವುದಿಲ್ಲ. ಆದ್ದರಿಂದ ಸಾಮಾಜಿಕ ಭದ್ರತೆ ಇದ್ದರೂ ಅದನ್ನು ಪಡೆಯಲು ತಿಳಿಯದೆ ಅದರಿಂದ ವಂಚಿತರಾಗಿ ಕೂಲಿ ಕೆಲಸ ಮಾಡಿ ಬಂದ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಾರೆ. ಜನಪ್ರತಿನಿಧಿಗಳು ಇವರ ಕಡೆಗೆ ಒಮ್ಮೆ ತಿರುಗಿ ನೋಡುವಂತ ಕೆಲಸ ಮಾಡಬೇಕು ಅವರಿಗೆ ಸರ್ಕಾರದ ಸವಲತ್ತು ಕೊಡಿಸುವ ಜತೆಗೆ ಭದ್ರತೆ ನೀಡುವಂತ ಕೆಲಸ ಅಗಬೇಕು ಎಂದು ಒತ್ತಾಯಿಸಿದರು.
ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಸೈಯದ್ ಗೌಸ್‌ಪೀರ್ ಮಾತನಾಡಿ, ಬಡತನ ರೇಖೆಗಿಂತ ಕಡಿಮೆ ಇರುವಂತಹ ಕುಟುಂಬದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಆಗದೆ ತಮ್ಮ ವೃತ್ತಿಗೆ ಬಳಕೆ ಮಾಡಿಕೊಂಡು ಮಕ್ಕಳಿಗೆ ಅಕ್ಷರ ಜ್ಞಾನ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರಚನೆ ಮಾಡಿ ಅವರ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಅಶ್ವಾಕ್, ಹಳದಪ್ಪ, ಸೈಯದ್ ಸಾಧಿಕ್, ಸೈಯದ್ ಅಕ್ಬರ್, ಹನುಮಂತಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net