

ಮದ್ದೂರು: ತಾಲೂಕಿನ ಚಿಕ್ಕ ಹೊಸಗಾವಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಿದ್ದರೂ ಅಧಿಕಾರಿಗಳು ಕಾರ್ಯರೂಪಕ್ಕೆ ತಂದು ಮೂಲಸೌಕರ್ಯ ಒದಗಿಸಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ಮಾಡಿದರು.
ಚಿಕ್ಕ ಹೊಸಗಾವಿ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಗುರುವಾರ ಆಕ್ರೋಶವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಸ್.ಗೌಡ (ಬೆಟ್ಟಸ್ವಾಮಿಗೌಡ)ಮಾತನಾಡಿ, ಚಿಕ್ಕ ಹೊಸಗಾವಿ ಗ್ರಾಮವನ್ನು 2017 ಹಾಗೂ 2019 ರಲ್ಲಿ 2 ಬಾರಿ ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಿದ್ದರು ಕೂಡ ತಾಲೂಕು ಆಡಳಿತ ಕಾರ್ಯರೂಪಕ್ಕೆ ತಂದಿಲ್ಲ ಎಂದು ತಾಲೂಕು ಆಡಳಿತದ ವಿರುದ್ಧ ಬೇಸರ ವ್ಯಕ್ತ ಪಡಿಸಿದರು.
ಸ್ವಾತಂತ್ರ್ಯ ಬಂದಾಗಿನಿಂದ ಗ್ರಾಮಕ್ಕೆ ಯಾವುದೇ ಮೂಲಸೌಕರ್ಯಗಳು ಇಲ್ಲ. ಸಮರ್ಪಕವಾದ ರಸ್ತೆ, ಚರಂಡಿ, ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಯಾವುದೇ ಸೌಕರ್ಯಗಳು ಇಲ್ಲದೆ ಪ್ರತಿನಿತ್ಯ ಗ್ರಾಮಸ್ಥರು ಪರಿತಪ್ಪಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕೂಡ ಇಲ್ಲದಿರುವುದರಿಂದ. ಸುಮಾರು ಎರಡು ಕಿಲೋಮೀಟರ್ ದೂರ ನಡೆದುಕೊಂಡು ಅಥವಾ ದ್ವಿಚಕ್ರ ವಾಹನಗಳಲ್ಲಿ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವಯೋವೃದ್ಧರು ಆಸ್ಪತ್ರೆಗೆ ಹೋಗಲು, ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಹೋಗಲು, ಗ್ರಾಮಸ್ಥರು ಬೇರೆ ಕಡೆಗೆ ಹೋಗಲು ತುಂಬಾ ಸಮಸ್ಯೆ ಆಗುತ್ತಿದ್ದರು ಸಂಬಂಧಿಸಿದವರು ಅಗತ್ಯ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ಕಂದಾಯ ಗ್ರಾಮವನ್ನಾಗಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ, ತಾಲೂಕು ದಂಡಾಧಿಕಾರಿಗಳಿಗೆ ಹಾಗೂ ಕಂದಾಯ ಸಚಿವರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ಯಾವುದೇ ರೀತಿಯ ದಾಖಲಾತಿಗಳು ರೈತರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ, ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕಂದಾಯ ಗ್ರಾಮ ಮಾಡಲು ಗಡಿ ಸಿದ್ಧಪಡಿಸುವುದು ಸೇರಿದಂತೆ ಇನ್ನಿತರ ಕೆಲಸಗಳಿಗೆ ಲಕ್ಷಾಂತರ ರೂ. ಬೇಕಾಗುತ್ತದೆ ಎಂದು ಹೇಳುತ್ತಾ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಸಂಬಂಧ ಜಿಲ್ಲಾಧಿಕಾರಿಗಳು, ತಾಲೂಕು ಆಡಳಿತ ಹಾಗೂ ಸರ್ಕಾರ ಅಗತ್ಯ ಕ್ರಮ ಕೈಗೊಂಡು ಕಂದಾಯ ಗ್ರಾಮವನ್ನಾಗಿ ಮಾಡುವ ಮುಂದಾಗುವ ಜತೆಗೆ ಗ್ರಾಮಕ್ಕೆ ಮೂಲಸೌಲಭ್ಯ ಕಲ್ಪಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಜತೆಗೂಡಿ ತಾಲೂಕು ಕಚೇರಿಯ ಮುಂದೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಧನಂಜಯ, ಮುಖಂಡರಾದ ಭಾಗ್ಯಮ್ಮಾ, ಚಿಕ್ಕತಾಯಮ್ಮಾ, ತಿಮ್ಮಮ್ಮ, ಚಂದ್ರಮ್ಮ, ಶಾರದಾ ನಿಂಗಮ್ಮ, ಜಯಶೀಲಾ, ಯಶೋದಮ್ಮಾ, ಚೆನ್ನಮ್ಮ, ವರದರಾಜು, ಸಂಪತ್ತು, ಬೆಟ್ಟಸ್ವಾಮಿ, ಹರೀಶ್, ಮಂಜು, ನಾಗರಾಜು, ಸಂತೋಷ್ ಇನ್ನಿತರರು ಇದ್ದರು.