

ಮಾಯಕೊಂಡ: ಗ್ರಾಮದ ಗ್ರಾಪಂ ಗ್ರಂಥಾಲಯಕ್ಕೆ ಮೂಲ ಸೌಕರ್ಯ ತುರ್ತಾಗಿ ಒದಗಿಸುವಂತೆ ಒತ್ತಾಯಿಸಿ ಓದುಗರು ಗ್ರಂಥಾಲಯದೊಳಗೆ ಮುರಿದಿರುವ ಕುರ್ಚಿಗಳನ್ನು ಪ್ರದರ್ಶಿಸಿ ಬುಧವಾರ ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಕನ್ನಡ ಯುವಶಕ್ತಿ ಕೇಂದ್ರದ ನಿಕಟಪೂರ್ವ ಅಧ್ಯಕ್ಷ ಎಂ.ಜಿ. ಗುರುನಾಥ್, ಮಾಯಕೊಂಡ ಗ್ರಾಪಂ ಗ್ರಂಥಾಲಯ ಒಳಒಕ್ಕರೆ ಜ್ಞಾನ ದೇಗುಲದ ವಾತಾವರಣವಿದೆ. ಆದರೆ, ಯಾವುದೇ ಸೌಕರ್ಯಗಳಿಲ್ಲ. ಗ್ರಂಥಾಲಯ ಇಲಾಖೆ ಗಮನಹರಿಸಿ ತಕ್ಷಣ ಬೇಕಾದ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ದಾವಣಗೆರೆ ಜಿಲ್ಲಾ ಗ್ರಂಥಾಲಯ ಬಿಟ್ಟರೆ ಗ್ರಾಮಾಂತರ ಪ್ರದೇಶಗಳಲ್ಲಿ ಅತಿ ಹೆಚ್ಚು ಕಥೆ, ಕವನ ಕಾದಂಬರಿ ಸೇರಿದಂತೆ ಒಟ್ಟು 3.500 ಪುಸ್ತಕ ಹಾಗೂ 5ಕ್ಕೂ ಹೆಚ್ಚು ಕನ್ನಡ ದಿನಪತ್ರಿಕೆ ಹೊಂದಿರುವ ಗ್ರಂಥಾಲಯ ಇದು. ಆದರೆ, ಕುಳಿತು ಓದಲು ಕುರ್ಚಿ ಬೆಂಚ್‌ಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಪಂ ಮಾಜಿ ಸದಸ್ಯ ಗಂಗಾಧರ್ ಮಾತನಾಡಿ, ಗ್ರಂಥಾಲಯಕ್ಕೆ ತುರ್ತಾಗಿ ದಿನಪತ್ರಿಕೆ ಓದಲು ಪ್ರತ್ಯೇಕ ಕೊಠಡಿ, ಸುಸಜ್ಜಿತ ಶೌಚಗೃಹ ಮತ್ತು ಅತ್ಯಾಧುನಿಕ ಕಾಂಪೌಂಡ್, ಸ್ಪರ್ಧಾತ್ಮಕ ಅಧ್ಯಯನ ಕೇಂದ್ರ, ಡಿಜಿಟಲ್ ಅಧ್ಯಯನ ಕೇಂದ್ರದ ಪ್ರತ್ಯೇಕ ಕೊಠಡಿ ನಿರ್ಮಿಸಬೇಕು ಎಂದರು.