ಬಳ್ಳಾರಿ ; ಭಾರತ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಘನತೆಯುಕ್ತ ಜೀವನ ನಡೆಸುವ ಹಕ್ಕಿದೆ ಎಂದು ಹಿರಿಯ ನ್ಯಾಯಾಧೀಶ ಆರ್.ಪಾಂಡು ಹೇಳಿದರು.
ಇಲ್ಲಿನ ಗಾಂಧಿಭವನದಲ್ಲಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ (ಬಿಎನ್‌ಎಚ್‌ಎಸ್)ವತಿಯಿಂದ ಭಾನುವಾರ ಆಯೋಜಿಸಿದ್ದ ಬೃಹತ್ ಜನತೆಯ ಸಮಾವೇಶದಲ್ಲಿ ಮಾತನಾಡಿದರು. ಎಂಟರಿಂದ ಹತ್ತು ದಿನಕ್ಕೊಮ್ಮೆ ಬರುವ ಕಲುಷಿತ ನೀರಿನಿಂದ ಆರೋಗ್ಯದ ಪರಿಣಾಮ ಬೀರಲಿದೆ. ನಗರದ ರಸ್ತೆಗಳು ಹದಗೆಟ್ಟಿವೆ, ವಾಯುಮಾಲಿನ್ಯ ಮಿತಿಮೀರಿದೆ. ಹಲವು ಸಮಸ್ಯೆಗಳಿದ್ದರೂ ಮಹಾನಗರ ಪಾಲಿಕೆ ಮಾತ್ರ ಯಾವ ಗಮನವೂ ಹರಿಸದೆ ಕೇವಲ ತೆರಿಗೆ ವಸೂಲಿ ಮಾಡುವುದರಲ್ಲಿ ನಿರತವಾಗಿದೆ ಎಂದರು.
ಜಿಲ್ಲೆಯನ್ನು ಲಂಡನ್ ಅಥವಾ ಪ್ಯಾರಿಸ್‌ನಂತೆ ಅಭಿವೃದ್ಧಿಗೊಳಿಸಿ ಎಂಬುದಾಗಿ ಬಯಸುತ್ತಿಲ್ಲ. ಶುದ್ಧ ನೀರು, ಗಾಳಿ, ಉತ್ತಮ ರಸ್ತೆ ನೀಡಿ. ಅಪರಾಧ ತಡೆಗಟ್ಟಲು ಹಾಗೂ ಟ್ರಾಫಿಕ್ ಸಮಸ್ಯೆ ತಗ್ಗಿಸಲು ಸಿಗ್ನಲ್‌ಗಳು ಅಳವಡಿಸಿ ಎಂದು ಆಗ್ರಹಿಸಿದರು.
ಬಳಿಕ ನಗರದ ಸಮಸ್ಯೆ ಮತ್ತು ಅವುಗಳ ಪರಿಹಾರಕ್ಕೆ ಸಂಬಂಧಿಸಿದ ಗೊತ್ತುವಳಿಯನ್ನು ಮಂಡಿಸಲಾಯಿತು. ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ 47 ಜನ ಸದಸ್ಯರ ಹೊಸ ಸಮಿತಿ ರಚನೆಯಾಯಿತು. ಈ ಸಮಿತಿಯ ನಿಯೋಗದಲ್ಲಿ ಜು 30 ರಂದು ಅಭಿವೃದ್ಧಿಗೆ ಸಂಬಂಧಿಸಿದಂತೆ ಪಾಲಿಕೆಯ ಮೇಯರ್ ಅವರಿಗೆ ಮನವಿ ಪತ್ರ ಸಲ್ಲಿಸಲು ನಿರ್ಧರಿಸಲಾಯಿತು.