ದೇವಸ್ಥಾನಗಳಿಗೆ ಮೂಲಸೌಕರ್ಯ ಒದಗಿಸಲಿ

1001985299
ಹಳೇಬೀಡು ಸಮೀಪದ ಪುಷ್ಪಗಿರಿಯಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪಾರ್ವತಮ್ಮ ದೇವಿ ದೇವಸ್ಥಾನದ ನೂತನ ದಾಸೋಹ ಭವನ ಲೋಕಾರ್ಪಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟನೆ ಮಾಡಿದರು. ಸೋಮಸುಂದರ್, ಶ್ರೀ ಜಯಚಂದ್ರ ಶೇಖರ ಸ್ವಾಮೀಜಿ, ಗ್ರಾನೈಟ್ ರಾಜಶೇಖರ್ ಇತರರು ಇದ್ದರು.
Published on

ಹಗರೆ; ಧಾರ್ಮಿಕ ಆಚರಣೆಗಳು ಜನರ ಮನಸ್ಸುಗಳನ್ನ ಸಮ್ಮಿಲನಗೊಳಿಸುವ ಕಾರ್ಯಕ್ರಮಗಳು ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.

ಪುಷ್ಪಗಿರಿಯಲ್ಲಿ ನಡೆದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ದಾಸೋಹ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವಸ್ಥಾನಗಳು ಜೀರ್ಣೋದ್ಧಾರ ಆಗುವುದರ ಜತೆಗೆ ಮೂಲಸೌಕರ್ಯಗಳನ್ನು ಒದಗಿಸಿಕೊಟ್ಟಾಗ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ದಾಸೋಹ ಭವನ ಕೂಡ ಭಕ್ತರಿಗೆ ಉತ್ತಮ ರೀತಿಯ ಸೌಲಭ್ಯಗಳೊಂದಿಗೆ ಇಂದು ಲೋಕಾರ್ಪಣೆಗೊಳ್ಳುತ್ತಿರುವುದು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹಾಗೂ ಭಕ್ತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಮಠ ಹಾಗೂ ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಎರಡು ಕೂಡ ಭಕ್ತರ ಎರಡು ಕಣ್ಣುಗಳು ಇದ್ದಂತೆ. ಮಠದ ಭಕ್ತರು ದೇವಾಲಯದ ಭಕ್ತರು ಒಟ್ಟೊಟ್ಟಿಗೆ ಪೂಜಾ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಕೈಂಕರ್ಯಗಳಲ್ಲಿ ಭಾಗವಹಿಸುವುದರಿಂದ ಪುಷ್ಪಗಿರಿ ಮತ್ತಷ್ಟು ಅಭಿವೃದ್ಧಿಯಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲ ಮಠ ಮತ್ತು ದೇವಸ್ಥಾನದ ಸದ್ಭಕ್ತರು ಒಂದುಗೂಡಿ ಸಾಗುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಕ್ತರ ಬಹುದಿನದ ಕನಸು ನನಸಾಗಿದೆ, ಪುಷ್ಪಗಿರಿಯಲ್ಲಿ ಒಂದು ಇತಿಹಾಸ ಸೃಷ್ಟಿಯಾಗಿದೆ.ಭಕ್ತಾದಿಗಳ ದಾನಧರ್ಮಗಳಿಂದ ಈ ಕ್ಷೇತ್ರ ಅಭಿವೃದ್ಧಿಯಲ್ಲಿ ಮುನ್ನೆಡೆಯುತ್ತಿದೆ. ಮಠ ದೇವಸ್ಥಾನ ಯಾವತ್ತಿದ್ದರೂ ಒಂದೇ ಎಂದ ಅವರು, ಇದೀಗ ಈ ಕ್ಷೇತ್ರ ಪ್ರವಾಸಿ ತಾಣವಾಗಿ ಮಾರ್ಪಾಡಾಗುತ್ತದೆ. ಹೊಯ್ಸಳ ರಾಜರ ಗುರುಗಳ ಮಾರ್ಗದರ್ಶನದಲ್ಲಿ ದೇವಸ್ಥಾನ ನಿರ್ಮಾಣವಾಗಿದೆ. ಇಲ್ಲಿ ಜಾತಿ, ಧರ್ಮ ಇಲ್ಲ. ಎಲ್ಲರೂ ಒಂದೇ ಎಂಭುದು ಇಲ್ಲಿನ ಧ್ಯೇಯ ವಾಕ್ಯ. ಮುಂದಿನ ದಿನಗಳಲ್ಲಿ ಪ್ರತಿದಿನ ದಾಸೋಹ ನಡೆಯುತ್ತದೆ ಇಂದಿನಿಂದಲೇ ಈ ದಿನವನ್ನ ದಾಸೋಹ ದಿನವನ್ನಾಗಿ ಮಾಡೋಣ ಎಂದರು.

ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಬಸವಣ್ಣನವರ ದಾಸೋಹ ಕಲ್ಪನೆ ಈ ಭಾಗದಲ್ಲಿ ಹೆಮ್ಮರವಾಗಿ ಬೆಳೆದಿದೆ. ಸುತ್ತಮುತ್ತಲಿನ ನೂರಾರು ಹಳ್ಳಿಗಳ ಮನೆದೇವರು ಮಲ್ಲಿಕಾರ್ಜುನ ಸ್ವಾಮಿ ಮತ್ತು ಪಾರ್ವತಮ್ಮನವರು ಈ ಭಾಗದ ಎಲ್ಲರಿಗೂ ಒಳಿತನ್ನೇ ಬಯಸುವ ಶಕ್ತಿ ದೇವರು. ಇಂಥ ಪುಣ್ಯಸ್ಥಳದಲ್ಲಿ ದಾಸೋಹ ಭವನ ಉದ್ಘಾಟನೆ ಆಗುತ್ತಿರುವುದು ಎಲ್ಲ ಭಕ್ತರಿಗೂ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ದಾಸೋಹ ಸಮಿತಿ ಅಧ್ಯಕ್ಷ ಸೋಮಸುಂದರ್, ಕೋಳಗುಂದ ಕೇದಿಗೆ ಮಠದ ಶ್ರೀ ಜಯಚಂದ್ರ ಶೇಖರ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಅಡಗೂರು ಬಸವರಾಜ್, ದಾಸೋಹ ಸಮಿತಿ ಕಾರ್ಯದರ್ಶಿ ಸಂಗಮ್ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net