ಕುರಹಟ್ಟಿ ಬಡಾವಣೆಗೆ ಮೂಲಸೌಲಭ್ಯ ಒದಗಿಸಿ

11 RON 2
Published on

ರೋಣ: ತಾಲೂಕಿನ ಸವಡಿ ಗ್ರಾಮದ ಕುರಹಟ್ಟಿ ಬಡಾವಣೆ ಜನರು ಕನಿಷ್ಠ ಮೂಲಸೌಲಭ್ಯಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ಕುರಿತು ಇಲ್ಲಿನ ಜನರು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಈ ಬಡಾವಣೆಗೆ ಕಾಲ್ನಡಿಗೆಯಲ್ಲಿ ತೆರಳಲೂ ಸಾಧ್ಯವಾಗುತ್ತಿಲ್ಲ. ರಸ್ತೆ ಹಾಗೂ ಮನೆಯ ಮುಂಭಾಗದಲ್ಲಿ ಚರಂಡಿಗಳನ್ನು ನಿರ್ಮಾಣ ಮಾಡಿಲ್ಲ. ಹೀಗಾಗಿ ನಿತ್ಯ ಬಳಕೆಯ ಶೌಚಗೃಹ ಹಾಗೂ ಕೊಳಚೆ ನೀರು ನಿಂತಲ್ಲೇ ನಿಂತುಕೊಂಡಿದೆ.

ಇಲ್ಲಿನ ಕೆಲ ಕುಟುಂಬದವರು ಮನೆಯ ಮಧ್ಯದಲ್ಲಿರುವ ಖಾಲಿ ಜಾಗದಲ್ಲಿ ಗುಂಡಿಗಳನ್ನು ತೋಡಿಕೊಂಡು ಕೊಳಚೆ ಹಾಗೂ ಶೌಚದ ನೀರನ್ನು ಬಿಡುತ್ತಾರೆ. ಕೊಳಚೆ ನೀರಿನ ಗುಂಡಿ ಹಾಗೂ ರಸ್ತೆಯಲ್ಲಿ ನಿಂತಿರುವ ಮಲೀನ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಗಬ್ಬು ವಾಸನೆ ಹರಡುತ್ತಿದೆ. ಇದರಿಂದಾಗಿ ನಿವಾಸಿಗಳಿಗೆ ಸಾಂಕ್ರಾಮಿಕ ರೋಗದ ಭೀತಿ ಶುರುವಾಗಿದೆ.

ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುವ ಅಭ್ಯರ್ಥಿಗಳು ನಂತರ ಇತ್ತ ಕಡೆ ಮುಖ ಹಾಕುವುದಿಲ್ಲ. ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೆ ಇಲ್ಲಿನ ಜ್ವಲಂತ ಸಮಸ್ಯೆಗಳು ಕಾಣುವುದಿಲ್ಲವೇ ಎಂದು ಇಲ್ಲಿನ ನಿವಾಸಿಗಳಾದ ರೇಣವ್ವಾ ಕುರಹಟ್ಟಿ, ಸಂಗವ್ವಾ ಅಬ್ಬಿಗೇರಿ, ಉಮೇಶಗೌಡ ಪಾಟೀಲ ಇತರರು ಪ್ರಶ್ನಿಸಿದ್ದಾರೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕ ಸೌಲಭ್ಯ ಒದಗಿಸಬೇಕಿದೆ.

ಮನೆಯ ಮುಂದೆ ನಿಲ್ಲುವ ಕೊಳಚೆ ನೀರಿನ ಗಬ್ಬು ವಾಸನೆಯಿಂದಾಗಿ ಊಟ ಮಾಡಲೂ ಆಗುತ್ತಿಲ್ಲ, ಈ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹೇಳಿ, ಹೇಳಿ ಸಾಕಾಗಿದೆ. ಅನಿವಾರ್ಯ ಕಾರಣಕ್ಕೆ ಪ್ರತಿ ದಿನ ನಸುಕಿನ ಜಾವ ಎದ್ದು ಮನೆಯ ಮುಂದಿನ ಕೊಳಚೆ ನೀರನ್ನು ಬಕೆಟ್​ನಲ್ಲಿ ತುಂಬಿ ಚೆಲ್ಲುವುದೇ ನಮ್ಮ ದಿನ ನಿತ್ಯದ ಕಾಯಕವಾಗಿದೆ.| ಸವಿತಾ ಸುಂಕದ, ಮಹಾದೇವ ಕುರಹಟ್ಟಿ, ಸ್ಥಳೀಯರು

ಸವಡಿ ಗ್ರಾಮದ ಕುರಹಟ್ಟಿ ಅವರ ಬಡಾವಣೆಯಲ್ಲಿ ಎಲ್ಲೂ ಕೊಳಚೆ ನೀರು ನಿಲ್ಲುವುದಿಲ್ಲ. ಯಾರಾದರೂ ನೀರು ಚಲ್ಲಿರಬಹುದು. | ಅನಿಲ ಬೇವಿನಗಿಡದ ಪಿಡಿಒ, ಸವಡಿ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net