ಮೂಲ ಸೌಕರ್ಯ ಒದಗಿಸಿ ಸ್ಥಳಾಂತರಿಸಿ

Provide infrastructure and relocate
ಬಾಗಲಕೋಟೆ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಸಂತ್ರಸ್ತರು ಬಿಟಿಡಿಎ ಕಚೇರಿ ಎದುರು ಪ್ರತಿಭಟನೆ ನಡೆಸಿ ಬಿಟಿಡಿಎ ಮುಖ್ಯ ಇಂಜಿನಿಯರ್ ಡಿ. ಬಸವರಾಜ ಅವರಿಗೆ ಮನವಿ ಸಲ್ಲಿಸಿದರು. ಸಮಿತಿ ಅಧ್ಯಕ್ಷ ಸಂಗಯ್ಯ ಸರಗಣಾಚಾರಿ, ಪ್ರಧಾನ ಕಾರ್ಯದರ್ಶಿ ಸುರೇಶ ಮಜ್ಜಗಿ, ಕಾರ್ಯಾಧ್ಯಕ್ಷ ಸದಾನಂದ ನಾರಾ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪತ್ತಾರ, ನಗರಸಭೆ ಸದಸ್ಯರಾದ ಶ್ರೀನಾಥ ಸಜ್ಜನ, ಶಶಿಕಲಾ ಮಜ್ಜಗಿ, ರಮೇಶ ಕೋಟಿ, ಭೀಮಸಿ ಮೋರೆ ಇತರರಿದ್ದರು.
Published on

ಬಾಗಲಕೋಟೆ: ನವನಗರ ಯೂನಿಟ್ 2ರ ಪ್ರದೇಶದಲ್ಲಿ ಸಮರ್ಪಕವಾಗಿ ಮೂಲ ಸೌಕರ್ಯ ಕಲ್ಪಿಸಿದ ಬಳಿಕ ಸಂತ್ರಸ್ತರನ್ನು ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಬಾಗಲಕೋಟೆ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಸಂತ್ರಸ್ತರು ಬಿಟಿಡಿಎ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಬಿಟಿಡಿಎ ಕಚೇರಿಗೆ ಆಗಮಿಸಿದ ಹೋರಾಟಗಾರರು ಬಿಟಿಡಿಎ ಮುಖ್ಯ ಇಂಜಿನಿಯರ್ ಡಿ. ಬಸವರಾಜ ಅವರಿಗೆ ಮನವಿ ಸಲ್ಲಿಸಿದರು.

ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಸಂಗಯ್ಯ ಸರಗಣಾಚಾರಿ ಮಾತನಾಡಿ, ಸಂತ್ರಸ್ತರು ಬದುಕು ಮುಳುಗಡೆಯಿಂದ ಹಸನಾಗಿಲ್ಲ. ಮತ್ತಷ್ಟು ತೊಂದರೆಗೆ ಸಿಲುಕಿದೆ. ಯುನಿಟ್ -2ರಲ್ಲಿನ ಸಂತ್ರಸ್ತರಿಗೆ ಆರ್ಥಿಕವಾಗಿ ವ್ಯಾಪಾರ ವಹಿವಾಟು ಇಲ್ಲವಾಗಿದೆ. ಯಾವುದೇ ಮೂಲ ಸೌಲಭ್ಯಗಳಿಲ್ಲ. 521 ಮೀ ಹಾಗೂ 523ಮೀ ಮತ್ತು 100 ಮೀ ವರೆಗಿನ ಸಂತ್ರಸ್ತರಿಗೆ ಮೂರನೇ ಕಂತಿನ ಪರಿಹಾರ ಧನ ಬಾಕಿ ಇದ್ದು, 106 ರಿಂದ 115ರ ಸೆಕ್ಟರ್‌ನಲ್ಲಿ ಸಂತ್ರಸ್ತರಿಗೆ ನಿವೇಶನ ಹಂಚಿಕೆಯಾಗಿದ್ದರೂ ಇನ್ನೂವರೆಗೂ ಯಾವುದೇ ಮೂಲ ಸೌಕರ್ಯ ಕಲ್ಪಿಸಿಲ್ಲ. ಈಗ ಸಂತ್ರಸ್ತರ ಹಳೇ ಮನೆಗಳನ್ನು ತೆರವುಗೊಳಿಸಲು ನೋಟಿಸು ಅಂಟಿಸಿದ್ದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

521 ಮೀಟರದಿಂದ 523 ಮೀ ಹಾಗೂ 100 ಮೀ ವರೆಗೆ ಮುಳುಗಡೆ ಹೊಂದಿದ ದೇವಸ್ಥಾನಗಳು, ಸಮುದಾಯಗಳು, ಸಂಘ-ಸಂಸ್ಥೆಗಳಿಗೆ ನಿವೇಶನ ಹಂಚಿಕೆಯಾಗಿಲ್ಲ. ಅವುಗಳ ನಿವೇಶನವನ್ನು ಆಯಾ ವಾರ್ಡಿನ ಸಂತ್ರಸ್ತರು ಬರುವ ಸೆಕ್ಟರ್‌ದಲ್ಲಿ ಧಾರ್ಮಿಕ ನಿವೇಶನ ಕಾಯ್ದಿರಿಸಲಾಗಿದೆ. ಅವುಗಳನ್ನು ಹಂಚಿಕೆ ಮಾಡಬೇಕು. 521 ಮೀ. ಮತ್ತು 523 ಮೀ ಹಾಗೂ 100 ಮೀ ಹಿನ್ನೀರಿನ ಕಟ್ಟಡಗಳು ನಡುಗಡ್ಡೆ ಹಾಗೂ ಮುಳುಗಡೆಯಾಗಲಾರದ ಕಟ್ಟಡಗಳಿಗೆ ಹೊಂದಿಕೊಂಡಿವೆ, ನಡುಗಡ್ಡೆ ಹಾಗೂ ನಗರವನ್ನು ಸಂಪೂರ್ಣ ಸ್ಥಳಾಂತರಗೊಳಿಸಬೇಕು. ನಡುಗಡ್ಡೆ ಪ್ರದೇಶಕ್ಕೆ ಈಗಾಗಲೇ11(1), 1052 ಮನೆಗಳಿಗೆ ನೋಟಿಫಿಕೇಶನ್ ಮಾಡಿದ್ದು ಮುಂದಿನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮಾಡಬೇಕೆಂದು ಮನವಿ ಮಾಡಿದರು.

ಪ್ರಧಾನ ಕಾರ್ಯದರ್ಶಿ ಸುರೇಶ ಮಜ್ಜಗಿ ಮಾತನಾಡಿ, ನವನಗರದ ಯೂನಿಟ್-2 ರಲ್ಲಿ ಅಗತ್ಯವಾಗಿ ಬೇಕಾದ ಆಸ್ಪತ್ರೆ, ಶಾಲೆ, ಬಸ್ ಸೌಲಭ್ಯವಿಲ್ಲ. ಮಾರುಕಟ್ಟೆ ವ್ಯವಸ್ಥೆ ಇಲ್ಲ. ನಿತ್ಯವೂ ಪ್ರತಿಯೊಂದು ಕೆಲಸಕ್ಕೆ 5-6 ಕಿಮೀ ನಡೆದುಕೊಂಡು ಬರಬೇಕು. ಇಲ್ಲವೇ ಸ್ವಂತ ವಾಹನ ಹೊಂದಿರಬೇಕು. ಹೀಗಾಗಿ ಮೂಲ ಸೌಕರ್ಯ ಒದಗಿಸಲು ಕ್ರಮ ವಹಿಸಬೇಕು. ಸ್ಥಳಾಂತರ ಕುರಿತು ಸೂಚನೆ ನೀಡಬೇಕೆಂದು ಆಗ್ರಹಿಸಿದರು.

ಮುಖ್ಯ ಇಂಜಿನಿಯರ್ ಡಿ. ಬಸವರಾಜ ಮಾತನಾಡಿ, ತೆರವುಗೊಳಿಸಲು ನಾವು ನೋಟಿಸ್ ಆದೇಶವನ್ನು ಕೊಟ್ಟಿಲ್ಲ. ಪ್ರಕಟಣೆ ನೀಡಿದ್ದೇವೆ. ಮಳೆಗಾಲ ಹಿನ್ನೆಲೆಯಲ್ಲಿ ಸಂತ್ರಸ್ತರು ಅಪಾಯದಲ್ಲಿ ಜೀವನ ಸಾಗಿಸಬಾರದು. ನವನಗರಕ್ಕೆ ಸ್ಥಳಾಂತರಗೊಳ್ಳಬೇಕೆಂದು ಮನವಿ ಮಾಡಿದ್ದೇವೆ ಎಂದು ಹೇಳಿದರು.
ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಸದಾನಂದ ನಾರಾ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪತ್ತಾರ, ನಗರಸಭೆ ಸದಸ್ಯರಾದ ಶ್ರೀನಾಥ ಸಜ್ಜನ, ಶಶಿಕಲಾ ಮಜ್ಜಗಿ, ರಮೇಶ ಕೋಟಿ, ಭೀಮಸಿ ಮೋರೆ, ಬುಡಾ ಮಾಜಿ ಸದಸ್ಯ ಗುಂಡೂರಾವ ಶಿಂಧೆ, ಮಹಾಂತೇಶ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net