

ಹರಪನಹಳ್ಳಿ: ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಅವರ ಭವಿಷ್ಯ ಉಜ್ವಲಗೊಳ್ಳಲಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಬಾಬು ಜಗಜೀವನ್‌ರಾಮ್ ಭವನದಲ್ಲಿ ತಾಲೂಕು ಶಿಕ್ಷಣ ಇಲಾಖೆವತಿಯಿಂದ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಕಲಿಕಾ ಸಂಭ್ರಮ ಮತ್ತು ಎಫ್‌ಎಲ್‌ಎನ್ ಕಲಿಕಾ ರಥೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಬಿಳಿ ಹಾಳೆ ಇದ್ದಂತೆ ಅವರನ್ನು ನಾವು ಹೇಗೆ ತಿದ್ದಿ-ತೀಡುತ್ತಾ ಬೆಳೆಸುತ್ತೇವೆ ಹಾಗೇಯೆ ಬೆಳೆಯುತ್ತಾರೆ. ಶಿಕ್ಷಕರು ಮಕ್ಕಳಿಗೆ ಜ್ಞಾನಾರ್ಜನೆ ನೀಡಿದರೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ನಗರದ ಶಾಲೆಗೂ ಕಮ್ಮಿ ಇಲ್ಲ ಎನ್ನುವ ರೀತಿಯಲ್ಲಿ ಹಳ್ಳಿ ಶಾಲೆಯ ಮಕ್ಕಳನ್ನು ಬೆಳೆಸಬೇಕು. ಮಕ್ಕಳಿಗೆ ಪಠ್ಯದ ಜೊತೆ ಕಥೆ ಕವನ, ಗುರುಕುಲ ಶಿಕ್ಷಣ, ಸಂಸ್ಕೃತಿ ಬಗ್ಗೆ ಹೇಳಿಕೊಡಬೇಕು ಆಗ ಕಲಿಕೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಜಗತ್ತು ಸ್ಪರ್ಧಾತ್ಮಕವಾಗಿ ಮುಂದುವರೆದಿದೆ. ಭಾರತ ಚಂದ್ರಯಾನಕ್ಕೂ ಹೋಗಿ ಸಾಧನೆ ಮಾಡಿದೆ. ಶೈಕ್ಷಣಿಕವಾಗಿ ಮಕ್ಕಳು ಮುನ್ನುಗಿದರೆ ಶಿಕ್ಷಣ ಕ್ಷೇತ್ರದಲ್ಲಿಯೂ ಕ್ರಾಂತಿ ಮಾಡಬಹುದು ಎಂದರು.
ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಸರ್ಕಾರ ಕಲಿಕಾ ಹಬ್ಬ ಕಾರ್ಯಕ್ರಮ ಜಾರಿಗೆ ತಂದಿದ್ದು, ತಾಲೂಕಿನಲ್ಲಿ ಕಲಿಕಾ ಹಬ್ಬವನ್ನು ತುಂಬಾ ಅರ್ಥಪೂರ್ಣವಾಗಿ ಆಚರಿಸಿದ್ದೇವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಬಾಬು ಜಗಜೀವನ್ ರಾಮ್ ಭವನದವರೆಗೆ ಎಫ್‌ಎಲ್‌ಎನ್ ಕಲಿಕಾ ರಥೋತ್ಸವ ನಡೆಯಿತು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ನಾಗರಾಜ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್ ಜಿ ಮನೋಹರ, ಪ್ರೌಢಶಾಲೆ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಗುರುಮೂರ್ತಿ, ಅರ್ಜುನ ಪರಸಪ್ಪ, ಅಂಜಿನಪ್ಪ, ಷರೀಫ್, ಶಿವಾಜಿನಾಯ್ಕ, ಲತಾ, ಗಿರಜ್ಜಿ ಮಂಜುನಾಥ, ಸಲೀಂ ಇತರರಿದ್ದರು.