ಅರ್ಜಿಗಳಿಗೆ ಕಾಲಮಿತಿಯಲ್ಲಿ ಮಾಹಿತಿ ನೀಡಿ: ವೆಂಕಟ್ ರಾಜಾ

dc sabhe
Published on

ಮಡಿಕೇರಿ: ವಿವಿಧ ಇಲಾಖೆಗೆ ಸಕಾಲ ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಕಾಲಮಿತಿಯಲ್ಲಿ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಸಂಬಂಧ ಅಧಿಕಾರಿಗಳ ಜೊತೆ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.

ಸಕಾಲ ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಕಾಲದಲ್ಲಿ ಮಾಹಿತಿ ಒದಗಿಸಬೇಕು. ತಮ್ಮ ಹಂತದಲ್ಲಿ ಕೆಲಸ ಆಗದಿದ್ದಲ್ಲಿ ಹಿಂಬರಹವನ್ನಾದರೂ ನೀಡಬೇಕು. ಅದನ್ನು ಹೊರತುಪಡಿಸಿ ಸತಾಯಿಸುವುದು ಬೇಡ ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸಕಾಲ ಕಾಯ್ದೆಯಡಿ ಸಲ್ಲಿಕೆಯಾದ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡದಿದ್ದಲ್ಲಿ ಯಾವ ರೀತಿ ಭಾವಿಸಿಕೊಳ್ಳಬೇಕು ಎಂಬ ಬಗ್ಗೆ ತಾವೇ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದ ಅವರು, ಸಕಾಲ ಕಾಯ್ದೆಯಡಿ ಸಲ್ಲಿಕೆಯಾದ ಅರ್ಜಿಗಳಿಗೆ ಕಾಲಮಿತಿಯಲ್ಲಿ ಮಾಹಿತಿ ನೀಡದಿದ್ದಲ್ಲಿ ದಂಡ ಪಾವತಿಸಬೇಕಾಗುತ್ತದೆ. ಆದ್ದರಿಂದ ಅಧಿಕಾರಿಗಳು ಸಮಯವನ್ನು ವ್ಯರ್ಥ ಮಾಡದೆ ಕಚೇರಿ ಕೆಲಸವನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಾಕೀತು ಮಾಡಿದರು.

ಕರ್ತವ್ಯದ ದಿನಗಳಲ್ಲಿ ಬೆಳಗ್ಗೆ ೧೦ ರಿಂದ ಸಂಜೆ ೬ ಗಂಟೆವರೆಗೆ (ಮಧ್ಯಾಹ್ನದ ಊಟದ ಸಮಯ ಹೊರತುಪಡಿಸಿ) ಕಚೇರಿ ಕೆಲಸ ಮಾಡಿದ್ದಲ್ಲಿ ಎಷ್ಟೇ ಒತ್ತಡ ಇದ್ದರೂ ಸಹ ಸಾರ್ವಜನಿಕ ಕೆಲಸಗಳನ್ನು ಪೂರ್ಣಗೊಳಿಸಬಹುದು. ಆ ನಿಟ್ಟಿನಲ್ಲಿ ಇಚ್ಛಾಶಕ್ತಿ ಇರಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.

ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಕಚೇರಿಯಲ್ಲಿ ಹಾಜರಿರಬೇಕು. ಸರ್ಕಾರ ಕೇಳುವ ಮಾಹಿತಿಯನ್ನು ಒದಗಿಸಬೇಕು. ಇದೇ ಮೇ ಕೊನೆ ವಾರದಲ್ಲಿ ಜಿಲ್ಲೆಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಆದ್ದರಿಂದ ಮುಂಗಾರು ಸಂದರ್ಭದಲ್ಲಿ ಕಳೆದ ಬಾರಿಯಂತೆಯೇ ಅಗತ್ಯ ತಯಾರಿ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ತಂಡವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ವೆಂಕಟ್ ರಾಜಾ ನಿರ್ದೇಶನ ನೀಡಿದರು.

ಸರ್ಕಾರದ ಮಾರ್ಗಸೂಚಿಯಂತೆ ಕರ್ತವ್ಯ ನಿರ್ವಹಿಸಬೇಕು. ದಾಖಲಾತಿ ಸರಿಯಾಗಿ ನಿರ್ವಹಣೆ ಮಾಡಬೇಕು. ಮಹಾಲೇಖಪಾಲಕರ ಆಡಿಟ್ ಕಂಡಿಕೆಗಳಿಗೆ ಮಾಹಿತಿ ನೀಡಲು ಬಾಕಿ ಇದ್ದು, ಕೂಡಲೇ ವರದಿ ನೀಡುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಹೊಸ ಆರ್ಥಿಕ ವರ್ಷ ಆರಂಭವಾಗಿದ್ದು, ವಿವಿಧ ಇಲಾಖೆಗಳು ಈಗಿನಿಂದಲೇ ಅಗತ್ಯ ಕಾರ್ಯಕ್ರಮ ರೂಪಿಸಬೇಕು. ಜೊತೆಗೆ ಪ್ರಗತಿ ಸಾಧಿಸಬೇಕು ಎಂದರು. ವಿವಿಧ ಇಲಾಖೆಗಳು ಹಾಗೂ ವಿದ್ಯಾರ್ಥಿ ನಿಲಯಗಳಿಗೆ ನಿವೇಶನ ಗುರುತು ಸಂಬಂಧ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾಹಿತಿ ಪಡೆದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ, ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯ ಅಭಿವೃದ್ಧಿ ಸಂಬಂಧಿಸಿದಂತೆ ಮಾಹಿತಿ ಒದಗಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಜಿ.ಪಂ.ಉಪಕಾರ್ಯದರ್ಶಿ ಅಬ್ದುಲ್ ನಬೀ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಕವಿತಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ, ಕಾರ್ಮಿಕ ಅಧಿಕಾರಿ ಕಾವೇರಿ, ತಹಶೀಲ್ದಾರರಾದ ಕಿರಣ್ ಗೌರಯ್ಯ, ಕೃಷ್ಣಮೂರ್ತಿ, ಶಿಕ್ಷಣಾಧಿಕಾರಿ ಮಹದೇವಸ್ವಾಮಿ, ತಾ.ಪಂ.ಇಒಗಳು, ಕೃಷಿ, ಸೆಸ್ಕ್, ಶಾಲಾ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಇತರರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net