ಮಂಗ ಸತ್ತರೆ ಮಾಹಿತಿ ಒದಗಿಸಿ

ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗನ ಕಾಯಿಲೆ ಕುರಿತು ಏರ್ಪಡಿಸಿದ್ದ ಅರಿವು ಕಾರ್ಯಾಗಾರಕ್ಕೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜು ಚಾಲನೆ ನೀಡಿದರು. ಡಾ.ಗೋಪಿನಾಥ್, ಲಕ್ಷ್ಮಿ ಕಾಂತ್, ಡಾ.ರವಿಕುಮಾರ್, ಡಾ.ವೈ. ಡಿ.ರಾಜಣ್ಣ, ರತ್ನಕುಮಾರಿ, ಸಿದ್ದರಾಜು ಇತರರಿದ್ದರು.
ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗನ ಕಾಯಿಲೆ ಕುರಿತು ಏರ್ಪಡಿಸಿದ್ದ ಅರಿವು ಕಾರ್ಯಾಗಾರಕ್ಕೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜು ಚಾಲನೆ ನೀಡಿದರು. ಡಾ.ಗೋಪಿನಾಥ್, ಲಕ್ಷ್ಮಿ ಕಾಂತ್, ಡಾ.ರವಿಕುಮಾರ್, ಡಾ.ವೈ. ಡಿ.ರಾಜಣ್ಣ, ರತ್ನಕುಮಾರಿ, ಸಿದ್ದರಾಜು ಇತರರಿದ್ದರು.
Published on

ಎಚ್.ಡಿ.ಕೋಟೆ: ಮಂಗನ ಕಾಯಿಲೆ ಮನುಷ್ಯರಿಂದ ಮನುಷ್ಯರಿಗೆ ಹರಡುವ ರೋಗವಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜು ತಿಳಿಸಿದರು.

ಪಟ್ಟಣದ ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಕಚೇರಿ, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ, ವಲಯ ಅರಣ್ಯ ಅಧಿಕಾರಿ ಕಚೇರಿ ಸಹಯೋಗದಲ್ಲಿ ವಲಯ ಅರಣ್ಯ ಅಧಿಕಾರಿಗಳಿಗೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕ್ಯಾಸನೂರ್ ಫಾರೆಸ್ಟ್ ಕಾಯಿಲೆ (ಮಂಗನ ಕಾಯಿಲೆ) ಬಗ್ಗೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕಾಡಿನಲ್ಲಿರುವ ಸೋಂಕು ಪೀಡಿತ ಉಣ್ಣೆಗಳು ಕಚ್ಚುವುದರಿಂದ ಮಂಗನ ಕಾಯಿಲೆ ಬರುತ್ತದೆ. ಈ ಕಾಯಿಲೆ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಕಾಡಿನಲ್ಲಿ ಮಂಗಗಳು ಸಾಯುವುದೇ ಈ ಕಾಯಿಲೆಯ ಮುನ್ಸೂಚನೆಯಾಗಿದೆ ಎಂದರು.

1957ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಕಾಡಿನಲ್ಲಿ ಪತ್ತೆ ಪತ್ತೆಯಾದ್ದರಿಂದ ಈ ರೋಗಕ್ಕೆ ಕ್ಯಾಸನೂರು ಕಾಡಿನ ಕಾಯಿಲೆ ಅಥವಾ ಮಂಗನ ಕಾಯಿಲೆ ಎಂದು ಕರೆಯಲಾಯಿತು. ಕಾಯಿಲೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಉಣ್ಣೆಗಳ ಮೂಲಕ ಹರಡುವುದರಿಂದ ಇಂಥದ್ದೇ ನಿರ್ದಿಷ್ಟ ಸ್ಥಳಕ್ಕೆ ಕಾಯಿಲೆ ಬರುವುದಾಗಿ ಹೇಳುವುದು ಅಸಾಧ್ಯ. ಇದರಿಂದ ಪ್ರತಿಯೊಬ್ಬರೂ ಚುಚ್ಚುಮದ್ದುನ್ನು ಹಾಕಿಸಿಕೊಳ್ಳಬೇಕಿದೆ ಎಂದರು.

ಮಂಗನ ಕಾಯಿಲೆ ಪತ್ತೆಗೆ ಉಚಿತ ಪರೀಕ್ಷೆಯನ್ನು ಶಿವಮೊಗ್ಗದ ಜಿಲ್ಲಾ ಪರಿಮಾಣ ಕ್ರಿಮಿ ಪರಿಶೋಧನಾ ಪ್ರಯೋಗಾಲಯದಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಕಾಯಿಲೆ ಲಕ್ಷಣಗಳು: ಸತತ ಎಂಟು 10 ದಿನಗಳ ವರೆಗೆ ಬಿಡದೆ ಬರುವ ಜ್ವರ. ವಿಪರಿತ ತಲೆನೋವು, ಸೊಂಟ ನೋವು ಕೈಕಾಲು ನೋವು ನಿಶಕ್ತಿ, ಕಣ್ಣು ಕೆಂಪಾಗುವುದು, ಜ್ವರ ಬಂದ 2 ವಾರಗಳ ನಂತರ ಮೂಗು ಬಾಯಿ ಗುದ ದ್ವಾರದಿಂದ ರಕ್ತ ಸ್ರಾವ ಆಗುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿರುತ್ತದೆ ಎಂದರು.

ಈ ಕಾಯಿಲೆಯ ಕಂಡುಬಂದ ವಾಸ ಸ್ಥಳದ ಸುತ್ತಮುತ್ತ ಊರಿನಲ್ಲಿ ಕಾಡಿನಲ್ಲಿ ಮಂಗ ಸತ್ತಿರುವುದು ಕಂಡರೆ ಕೂಡಲೇ ಸ್ಥಳೀಯ ಆರೋಗ್ಯ ಅಧಿಕಾರಿಗಳು ಆಥವಾ ಆರೋಗ್ಯ ಕಾರ್ಯಕರ್ತರಿಗೆ ತಿಳಿಸಬೇಕು. ಮಂಗಗಳು ಮೃತಪಟ್ಟಿರುವ ಕಾಡಿನಲ್ಲಿ ಸಂಚರಿಸುವಾಗ ಮೈತುಂಬ ಬಟ್ಟೆ ಧರಿಸಿ ಆರೋಗ್ಯ ಇಲಾಖೆಯಿಂದ ವಿತರಿಸಲಾದ ಡಿಎಂಪಿ ತೈಲವನ್ನು ಕೈಕಾಲುಗಳಿಗೆ ಲೇಪಿಸಿಕೊಂಡು ಹೋಗಬೇಕು. ಕಾಡಿನಿಂದ ಬಂದ ನಂತರ ಸೋಪು ಹಚ್ಚಿ ಬಿಸಿ ನೀರಿನಿಂದ ಸ್ನಾನ ಮಾಡಬೇಕು. ಬಟ್ಟೆಗಳನ್ನು ಬಿಸಿ ನೀರಿನಿಂದ ಸೋಪು ಹಚ್ಚಿ ತೊಳೆಯಬೇಕು ಎಂದರು.

ಮಗನ ಕಾಯಿಲೆಗೆ ಲಸಿಕೆ ಲಭ್ಯವಿದ್ದು, ಇದರಿಂದ ಯಾವುದೇ ದುಷ್ಪರಿಣಾಮವಿಲ್ಲ. ಈ ಲಸಿಕೆಯನ್ನು ಆರೋಗ್ಯವಂತನಾದ ವ್ಯಕ್ತಿ ಸರಿಯಾದ ಪ್ರಮಾಣದಲ್ಲಿ ಆಗಸ್ಟ್ ತಿಂಗಳ ಮೊದಲು ಮತ್ತು ಒಂದು ತಿಂಗಳ ಅಂತರದಲ್ಲಿ ಎರಡನೇ ವರಸೆ ಲಸಿಕೆ ಪಡೆಯಬೇಕು. 2ನೇ ಚುಚ್ಚುಮದ್ದು ಹಾಕಿಸಿಕೊಂಡ 30 ದಿನಗಳ ನಂತರವೇ ರೋಗನಿರೋಧಕ ಶಕ್ತಿ ಬರುತ್ತದೆ. ಪ್ರತಿ ವರ್ಷ ವರ್ಧಕ ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳಬೇಕು. ಗರ್ಭಿಣಿ ಸ್ತ್ರೀಯರು ಈ ಚುಚ್ಚುಮದ್ದನ್ನು ಹಾಕಿಸಿಕೊಳ್ಳಬಾರದು ಎಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಗೋಪಿನಾಥ್, ಎಸಿಎಫ್ ಲಕ್ಷ್ಮೀಕಾಂತ್, ಟಿಎಚ್‌ಒ ಡಾ.ರವಿಕುಮಾರ್, ಡಾ.ವೈ. ಡಿ. ರಾಜಣ್ಣ ಮಾತನಾಡಿದರು.

ಕೀಟಶಾಸ್ತ್ರಜ್ಞೆ ರತ್ನಕುಮಾರಿ, ಆರ್‌ಎಫ್‌ಒ ಸಿದ್ದರಾಜು, ರಶ್ಮಿ, ವೈದ್ಯರಾದ ಡಾ.ಶೇಷಾದ್ರಿ, ಡಾ.ಆಶ್ರಿತ್ ಶೆಟ್ಟಿ, ಡಾ.ಚಂದ್ರಶೇಖರ್, ಡಾ.ಹರ್ಷ, ಡಾ.ಕೀರ್ತಿ, ಡಾ.ವರ್ಷ, ಕೀಟ ತಜ್ಞರಾದ ರತ್ನಕುಮಾರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಚಂದ್ರಶೇಖರ್, ನಾಗೇಂದ್ರ, ಚಂದ್ರು ರವಿರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net